Spread the love

ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ಇಂದಿನಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಯುವ ಮಾರಕ ವೇಗಿ ಉಮ್ರಾನ್ ಮಲಿಕ್, ಭಾರತ ಏಕದಿನ ಕ್ರಿಕೆಟ್ ತಂಡ ಕೂಡಿಕೊಂಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕಳೆದ ತಿಂಗಳು ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ, ಟೀಂ ಇಂಡಿಯಾ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸಿದ್ದರು. ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ಶಮಿ, ನ್ಯೂಜಿಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಇನ್ನು ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಸ್ಥಾನ ಪಡೆದಿದ್ದ ಮೊಹಮ್ಮದ್ ಶಮಿ, ಅಭ್ಯಾಸ ನಡೆಸುತ್ತಿದ್ದಾಗ ಭುಜದ ನೋವಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಇನ್ನು ಏಕದಿನ ಸರಣಿಯ ಬಳಿಕ ಟೀಂ ಇಂಡಿಯಾ ಡಿಸೆಂಬರ್ 14ರಿಂದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದ್ದು, ಟೆಸ್ಟ್‌ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

“ವೇಗದ ಬೌಲರ್‌ ಮೊಹಮ್ಮದ್ ಶಮಿ, ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಅಭ್ಯಾಸ ನಡೆಸುವಾಗ ಭುಜದ ನೋವಿಗೆ ಒಳಗಾಗಿದ್ದಾರೆ. ಅವರೀಗ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳ ನಿಗಾದಲ್ಲಿದ್ದಾರೆ. ಹೀಗಾಗಿ ಅವರು ಬಾಂಗ್ಲಾದೇಶ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಭಾರತ ತಂಡದ ಆಯ್ಕೆ ಸಮಿತಿಯು ಮೊಹಮ್ಮದ್ ಶಮಿ ಬದಲಿಗೆ ಉಮ್ರಾನ್ ಮಲಿಕ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love