ಕತಾರ್: ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಸ್ವಿಜರ್ಲೆಂಡ್ ವಿರುದ್ಧದ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಡರ್‌ಫೈನಲ್ ಪಂದ್ಯಕ್ಕೆ ಪೋರ್ಚುಗಲ್ ತಂಡ ಆಯ್ಕೆ ಮಾಡಿದ್ದ ತನ್ನ ಆರಂಭಿಕ 11ರಲ್ಲಿ ಪೋರ್ಚುಗಲ್ ತಂಡದ ಸ್ಟಾರ್ ಸ್ಟ್ರೈಕರ್ ಮತ್ತು ಹಾಲಿ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿರಲಿಲ್ಲ.ಕೋಚ್ ಜೊತೆಗಿನ ಜಗಳದ ಕಾರಣ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತಂಡದಿಂದ ಹೊರಬಂದ ಎರಡು ವಾರಗಳ ನಂತರ ಅವರನ್ನು ಅವರ ಸ್ವಂತ ತಂಡವಾದ ಪೋರ್ಚುಗಲ್ ಕೂಡ ತನ್ನ ಆರಂಭಿಕ ಆಡುವ 11ರ ಬಳಗದಿಂದ ಕೈಬಿಟ್ಟಿತ್ತು.
ಇಂಗ್ಲಿಷ್ ಪ್ರೀಮಿಯರ್ ಲೀಗ್ ಟೂರ್ನಿಯ ದೈತ್ಯ ಕ್ಲಬ್ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಆಡಳಿತ ಮಂಡಳಿಯೊಂದಿಗೆ ರೊನಾಲ್ಡೊ ವಾಗ್ವಾದ ನಡೆಸಿದ್ದರು. ಕ್ಲಬ್ ತನಗೆ ಮೋಸ ಮಾಡಿದೆ ಎಂದು ಅವರು ಪಿಯರ್ಸ್ ಮಾರ್ಗಾನ್‌ಗೆ ನೀಡಿದ್ದ ಸಂದರ್ಶನ ಒಂದರಲ್ಲಿ ಹೇಳಿಕೆ ಕೊಟ್ಟಿದ್ದರು. ನಂತರ ಅವರು ಮತ್ತು ಕ್ಲಬ್ ಸೌಹಾರ್ದಯುತವಾಗಿ ಒಪ್ಪಂದ ಕೈಬಿಟ್ಟಿವೆ.
2008ರ ಯುರೋಪಿಯನ್ ಚಾಂಪಿಯನ್‌ಷಿಪ್ ಟೂರ್ನಿಯ ಪಂದ್ಯಗಳ ನಂತರ ಇದೇ ಮೊದಲ ಬಾರಿಗೆ ಪ್ರಮುಖ ಪಂದ್ಯಾವಳಿ ಒಂದರಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ರಾಷ್ಟ್ರೀಯ ತಂಡದ ಆರಂಭಿಕ 11ರಲ್ಲಿ ಸ್ಥಾನ ಪಡೆಯಲು ವಿಫಲರಾದರು.
ರೊನಾಲ್ಡೊ ಬದಲಿಗೆ ಗೊನ್ಸಾಲೊ ರಾಮೋಸ್ ಆಡುವ XIನಲ್ಲಿ ಸ್ಥಾನ ಪಡೆದರು. ರೊನಾಲ್ಡೊ ಅನುಪಸ್ಥಿತಿಯಲ್ಲಿಯೂ ಯುವ ಆಟಗಾರ ರಾಮೊಸ್ ಹ್ಯಾಟ್ರಿಕ್ ಗೋಲ್ ಬಾರಿಸಿ ಪೋರ್ಚುಗಲ್‌ಗೆ 6-1 ಅಂತರದ ಭರ್ಜರಿ ಜಯ ತಂದುಕೊಟ್ಟರು. ಪೋರ್ಚುಗಲ್ ಪರ ಗೊಂಜಾಲೊ ರಾಮೋಸ್ ಹ್ಯಾಟ್ರಿಕ್ ಗೋಲು ಗಳಿಸಿದರೆ, ಪೆಪೆ, ರಾಫೆಲ್ ಗೆರೆರೊ ಮತ್ತು ರಾಫೆಲ್ ಲ್ಯೂ ತಲಾ ಒಂದು ಗೋಲ್ ಗಳಿಸಿ ಭರ್ಜರಿ ಗೆಲುವಿಗೆ ಬಲವಾದರು.