Spread the love

ಹಾವೇರಿ: ಪಂಚಮಸಾಲಿ ಮೀಸಲಾತಿ ವಿಚಾರ ಬಿಜೆಪಿಯ ಸ್ವಪಕ್ಷದ ನಾಯಕರ ನಡುವೆಯೇ ವಾಕ್ಸಮರಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಮುರುಗೇಶ್ ನಿರಾಣಿಯವರಿಗೆ ಮತ್ತೆ ಸವಾಲು ಹಾಕಿದ್ದಾರೆ.

ಹಾವೇರಿಯಲ್ಲಿ ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಯತ್ನಾಳ್, ಸಚಿವ ನಿರಾಣಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ನನ್ನನ್ನು ಚುನಾವಣೆಯಲ್ಲಿ ಸೋಲಿಸುವುದಾಗಿ ಪ್ರಮಾಣ ಮಾಡ್ತಾನೆ, ನಿನಗೆ ತಾಕತ್ತಿದ್ದರೆ ನನ್ನನ್ನು ಪಕ್ಷದಿಂದ ಹೊರಹಾಕು ಎಂದು ಮುರುಗೇಶ್ ನಿರಾಣಿ ಅವರಿಗೆ ಸವಾಲು ಹಾಕಿದ್ದಾರೆ.

ಇದಕ್ಕೆಲ್ಲ ನಾನು ಹೆದರುವವನಲ್ಲ, ಹೆಚ್ಚು ಕಡಿಮೆಯಾದ್ರೆ ಸಿಎಂ ಬಸವರಾಜ್ ಬೊಮ್ಮಾಯಿ ನನಗೆ ಟಿಕೆಟ್ ಕೊಡದಿರಬಹುದು. ಆದರೆ ನನಗೆ ಟಿಕೆಟ್ ಕೊಡುವುದು ಬಿಡುವುದು ಸಿಎಂ ಕೈಲಿಲ್ಲ. ಹೈಕಮಾಂಡ್ ನನಗೆ ಟಿಕೆಟ್ ಕೊಡಲಿದೆ ಎಂದರು.

ಮುಖ್ಯಮಂತ್ರಿಗಳು ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯದ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿವರಿಸುತ್ತೇನೆ. ನಾವು ಕೇಂದ್ರದವರಿಗೆ ಎಲ್ಲವನ್ನೂ ತಿಳಿಸುತ್ತೇವೆ. ಸಿಎಂ ಬೊಮ್ಮಾಯಿ ಮೇಲೆ ನಮಗೆ ನಂಬಿಕೆ ಇಲ್ಲ. 2ಎ ಮೀಸಲಾತಿಗೆ ಕೇಂದ್ರದಿಂದ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದವರು ಇನ್ನೂ ಯಾಕೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುತ್ತಿಲ್ಲ? ಕರ್ನಾಟಕದ ಜನ ಸ್ಟೇ ಕೊಟ್ರೆ 5 ವರ್ಷ ಅನುಭವಿಸಬೇಕಾಗುತ್ತೆ. ಕೆಲವರಿಗೆ ನಮ್ಮ ರಾಜ್ಯದ ಜನ ಕೊಟ್ಟಿರುವ ಸ್ಟೇ ಯಿಂದಾಗಿ ಪಂಚಾಯ್ತಿ ಸದಸ್ಯರೂ ಆಗದ ಪರಿಸ್ಥಿತಿ ಬಂದಿದೆ ಎಂದು ಸಿಎಂ ಬೊಮ್ಮಾಯಿಯವರ ವಿರುದ್ಧವೂ ಗುಡುಗಿದ್ದಾರೆ.


Spread the love

By admin