Spread the love

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಅವಧಿಯ ಕೊನೆಯ ಬಜೆಟ್ ನಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಿಸಲು ಬಿಜೆಪಿ ಸರ್ಕಾರ ಮುಂದಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಮಾದರಿಯಲ್ಲಿ ರಾಜ್ಯದಾದ್ಯಂತ ಎಲ್ಲಾ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಯೋಜನೆಗೆ ಪ್ರಧಾನಿ ಮೋದಿ ಅವರ ಮೂಲಕ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಜನ ಸಮುದಾಯ ತಲುಪುವ ಯೋಜನೆಗಳಿಗೆ ಚಾಲನೆ ನೀಡಲು 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.

155 ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೊಳಿಸುವ ನಿರೀಕ್ಷೆ ಇದ್ದು, ರಾಜ್ಯದ 55 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುವುದು ಉಚಿತವಾಗಿ ನೀರು ಪೂರೈಕೆ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

ಮೇಲ್ಮೈ ಜಲ ಮೂಲಗಳಿಂದ ಗುಣಮಟ್ಟದ ಕುಡಿಯುವ ನೀರು ಪೂರೈಕೆ ಮಾಡುವುದು ಯೋಜನೆಯ ಉದ್ದೇಶವಾಗಿದ್ದು, ಜಲಜೀವನ್ ಮಿಷನ್ ಯೋಜನೆ ವಿಸ್ತರಣೆ ರೀತಿಯಲ್ಲಿ ಇದು ಇರಲಿದೆ. ಮಾಸಿಕ 10,000 ಲೀಟರ್ ಮಿತಿಗೆ ಒಳಪಟ್ಟು ಉಚಿತವಾಗಿ ನೀರು ಒದಗಿಸಲು ಚಿಂತನೆ ಕೂಡ ನಡೆದಿದೆ.

ರಾಜ್ಯದಾದ್ಯಂತ ಗರಿಷ್ಠ 55 ಲಕ್ಷ ಮನೆಗಳು ಈ ಯೋಜನೆ ವ್ಯಾಪ್ತಿಗೆ ಬರಬಹುದಾಗಿದ್ದು, ಎಷ್ಟು ವೆಚ್ಚವಾಗಬಹುದು ಎಂಬ ಲೆಕ್ಕಾಚಾರ ನಡೆದಿದೆ. ಅನುದಾನ ಹೊಂದಾಣಿಕೆ ಮಾಡಿಕೊಂಡು ಬಜೆಟ್ ನಲ್ಲಿ ಜಲಜೀವನ ಮಿಷನ್ ಗೆ ಹೊಸ ರೂಪ ನೀಡಿ ರಾಜ್ಯದ ಪಟ್ಟಣ, ನಗರವಾಸಿಗಳ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಈ ಜನಪ್ರಿಯ ಯೋಜನೆ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


Spread the love

By admin