Spread the love

ಬೆಂಗಳೂರು: ಮತದಾರರಿಗೆ ಬಿಜೆಪಿ ಹಣದ ಆಮಿಷದ ಬಗ್ಗೆ ಕಾಂಗ್ರೆಸ್ ನಾಯಕರು ದೂರು ದಾಖಲಿಸಿರುವ ವಿಚಾರವಾಗಿ ಕಿಡಿಕಾರಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಇದು ಅತ್ಯಂತ ಕೀಳುಮಟ್ಟದ ರಾಜಕಾರಣ. ಸುಳ್ಳು ಹಾಗೂ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಎಂದರೆ ಪ್ರೆಶರ್ ಕುಕ್ಕರ್ ಪಕ್ಷ. ಯಾರಾದರೂ ಹೇಳಿಕೆ ನೀಡಿದರೆ ಅದಕ್ಕೆ ಸರ್ಕಾರ ಜವಾಬ್ದಾರಿಯಲ್ಲ. ಹೇಳಿಕೆ ನೀಡಿದವರೇ ಜವಾಬ್ದಾರರು ಎಂದು ಸುಪ್ರೀಂಕೋರ್ಟ್ ತೀರ್ಪು ಕೂಡ ನೀಡಿದೆ. ಇದೆಲ್ಲ ಗೊತ್ತಿದ್ದು, ರಾಜಕೀಯ ಕಾರಣಕ್ಕೆ, ಸೋಲು ಗ್ಯಾರಂಟಿಯಾಗಿರವ ಕಾರಣಕ್ಕೆ ಸುಳ್ಳು ಆರೋಪಗಳನ್ನು ಮಾಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆ ಇನ್ನೂ ಪ್ರಯತ್ನ ಮಾಡುತ್ತಾರೆ ಎಂದರು.

ಕಾಂಗ್ರೆಸ್ ಎಂದರೆ ಪ್ರೆಶರ್ ಕುಕ್ಕರ್ ಪಕ್ಷ. ಅಲ್ಲಿ ಬಾಂಬ್ ಕುಕ್ಕರ್ ಇಲ್ಲಿ ಪ್ರೆಶರ್ ಕುಕ್ಕರ್. ಚುನಾವಣೆ ಸಮಯದಲ್ಲಿ ಪ್ರೆಶರ್ ಕುಕ್ಕರ್ ಕೊಟ್ಟು ಗೆಲ್ಲುವುದು. ಹೀಗಾಗಿ ಅವರಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ. ಅದರಲ್ಲಿ ಬಾಂಬ್ ಇಟ್ಟರೂ ಅಲ್ಲ ಪ್ರೆಶರ್ ಕುಕ್ಕರ್ ಎನ್ನುತ್ತಾರೆ ಎಂದು ಗುಡುಗಿದರು.

ಇದೇ ವೇಳೆ ಸಿಎಂ ಬೊಮ್ಮಾಯಿ ಭ್ರಷ್ಟಾಚಾರದ ಪಿತಾಮಹ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಈ ದೇಶದ ಮೊದಲ ಭ್ರಷ್ಟಾಚಾರದ ಜೀಪ್ ಹಗರಣ ಪ್ರಾರಂಭವಾಗಿದ್ದು ಕಾಂಗ್ರೆಸ್ ಪಕ್ಷದಿಂದ. ಅಂದಿನ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕಾಗಿ ಬಂತು. ಸ್ವಾತಂತ್ರ್ಯ ಬಂದ ನಂತರದಲ್ಲಿ ಭ್ರಷ್ಟಾಚಾರ ಅಲ್ಲಿಂದ ಪ್ರಾರಂಭವಾಯಿತು. ಭ್ರಷ್ಟಾಚಾರ ಕಾಂಗ್ರೆಸ್ ನ ಅವಿಭಾಜ್ಯ ಅಂಗ. ಇನ್ನು ಡಿ.ಕೆ.ಶಿವಕುಮಾರ್ ಅವರ ಬಗ್ಗೆ ನಾನೇನು ಹೇಳುವುದು.ಬಹಳ ಸ್ವಚ್ಛ ಮನುಷ್ಯ. ಅವರಷ್ಟು ಸ್ವಚ್ಛ ಮನುಷ್ಯ ಪ್ರಸ್ತುತ ರಾಜಕಾರಣದಲ್ಲಿ ಯಾರು ಇಲ್ಲ ಎಂದು ವ್ಯಂಗ್ಯವಾಡಿದರು.


Spread the love

By admin