ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿ ಪಟುಗಳು ಪ್ರತಿಭಟನೆ ಮುಂದುವರೆಸುತ್ತಿದ್ದರೆ, ಇತ್ತ ಅಥ್ಲೀಟ್‌ಗಳು ದೇಶದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಹಾಳು ಮಾಡುತ್ತಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿಟಿ ಉಷಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆಪಾದನೆಗಳ ತನಿಖೆಯ ವಿವರಗಳನ್ನು ಸರ್ಕಾರ ಸಾರ್ವಜನಿಕವಾಗಿ ಹೊರತರಬೇಕೆಂದು ಆಗ್ರಹಿಸಿ ಒಲಿಂಪಿಕ್ ಪದಕ ವಿಜೇತ ಭಜರಂಗ್ ಪೂನಿಯಾ ನೇತೃತ್ವದಲ್ಲಿ ಅಥ್ಲೀಟ್‌ಗಳು ಪ್ರತಿಭಟನೆ ನಡೆಸಿದ್ದಾರೆ.
ಈ ವಿಚಾರವಾಗಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪಿಟಿ ಉಷಾ, “ನಿಮ್ಮ ಮಾತನ್ನು ಮುಂದಿಡಲು ಸಾಕಷ್ಟು ಮಾರ್ಗಗಳಿವೆ. ಹೀಗೆ ಬೀದಿಗಿಳಿದು ಪ್ರತಿಭಟನೆ ಮಾಡುವುದರಿಂದ ದೇಶದ ಹೆಸರು ಹಾಳಾಗಲಿದೆ. ಅಥ್ಲೀಟ್‌ಗಳ ಸಮಿತಿ ಬಳಿ ದೂರು ನೀಡಬಹುದಿತ್ತು. ಹೀಗೆ ಮಾಡುವುದು ಕೆಟ್ಟ ಪ್ರವೃತ್ತಿಗೆ ನಾಂದಿ ಹಾಡಿದಂತೆ ಹಾಗೂ ಅಶಿಸ್ತಿನ ನಡೆಯಾಗಿದೆ,” ಎಂದು ತಿಳಿಸಿದ್ದಾರೆ.
ಕುಸ್ತಿ ಫೆಡರೇಷನ್‌ನ ದಿನನಿತ್ಯ ಆಡಳಿತ ನಿರ್ವಹಣೆ ನೋಡಿಕೊಳ್ಳಲು ಮೂರು ಸದಸ್ಯರ ತಾತ್ಕಾಲಿಕ ಸಮಿತಿಯೊಂದನ್ನು ರಚಿಸಲಾಗಿದೆ. ಮಾಜಿ ಒಲಿಂಪಿಯನ್ ಶೂಟರ್ ಸುಮಾ ಶಿರೂರ್, ವುಶೂ ಅಸೋಸಿಯೇಷನ್ ಆಫ್ ಇಂಡಿಯಾದ ಬಾಸ್ ಭೂಪೇಂದ್ರ ಸಿಂಗ್ ಹಾಗೂ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರೊಬ್ಬರು ಈ ಸಮಿತಿಯಲ್ಲಿ ಇರಲಿದ್ದಾರೆ.
ಏಳು ಮಹಿಳಾ ಅಥ್ಲೀಟ್‌ಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಪ್ರಕರಣದ ತನಿಖೆ ನಡೆಸಲು ದೆಹಲಿ ಪೊಲೀಸ್‌ಗೆ ಸೂಚಿಸಲು ಕೋರಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಾಧೀಶ ಪಿ ಎಸ್ ನರಸಿಂಹ ನೇತೃತ್ವ ಪೀಠವು ದೆಹಲಿ ಪೊಲೀಸ್‌ಗೆ ಸೂಚಿಸಿದೆ