Spread the love

ಸಾಮಾನ್ಯವಾಗಿ ಕ್ರಿಕೆಟರುಗಳಿಗೆ ಇತರೆ ಕ್ರೀಡಾಪಟುಗಳಿಗೆ ಹೋಲಿಸಿದಲ್ಲಿ ಪಥ್ಯದ ವಿಚಾರದಲ್ಲಿ ಅಂಥಾ ಕಟ್ಟುನಿಟ್ಟಿನ ಶಿಸ್ತುಗಳೇನೂ ಇರುವುದಿಲ್ಲ. ಇತ್ತೀಚೆಗಂತೂ ಜಗತ್ತಿನ ವಿವಿಧೆಡೆ ಟಿ20 ಲೀಗ್‌ಗಳಿಗೆಂದು ಬೇರೆ ಬೇರೆ ದೇಶಗಳಲ್ಲಿ ವಾರಗಟ್ಟಲೇ ಇದ್ದು ಬರುವ ವೃತ್ತಿಪರ ಕ್ರಿಕೆಟರುಗಳಿಗೆ ಅಲ್ಲಿನ ಖಾದ್ಯ ಪರಂಪರೆಗಳನ್ನು ಅನ್ವೇಷಿಸುವ ಅವಕಾಶಗಳು ಸಿಗುತ್ತವೆ.

 

ಪಂಜಾಬ್ ಕಿಂಗ್ಸ್‌ ತಂಡ ಒಡತಿ ಪ್ರೀತಿ ಜ಼ಿಂಟಾ ಈ ವಿಚಾರದಲ್ಲಿ ಆಸಕ್ತಿಕರ ಕಥೆಯೊಂದನ್ನು ಹಂಚಿಕೊಂಡಿದ್ದಾರೆ. 2009 ರ ಐಪಿಎಲ್‌ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿತ್ತು. ಆ ವೇಳೆ ಪಂಜಾಬ್ ಕಿಂಗ್ಸ್‌ ಅನ್ನು ಕಿಂಗ್ಸ್‌ ಇಲೆವೆನ್ ಪಂಜಾಬ್ ಎಂದು ಕರೆಯಲಾಗುತ್ತಿತ್ತು.

ಪಂಜಾಬೀ ಖಾದ್ಯಗಳ ಮೇಲೆ ತಂಡದ ಆಟಗಾರರು ಭಾರೀ ಪ್ರೀತಿ ಬೆಳೆಸಿಕೊಂಡಿದ್ದ ಕಾರಣ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ಸಿಗುತ್ತಿದ್ದ ಆಹಾರ ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಈ ವಿಚಾರ ಗಮನಿಸಿದ ಪ್ರೀತಿ ಜ಼ಿಂಟಾ, ತಮ್ಮ ತಂಡ ಮುಂದಿನ ಪಂದ್ಯ ಗೆದ್ದಲ್ಲಿ ತಾವೇ ಎಲ್ಲರಿಗೂ ಆಲೂ ಪರಾಠ ಮಾಡಿಕೊಡುವುದಾಗಿ ಹೇಳಿದ್ದರು.

ತಂಡದ ಒಡತಿಯ ಮಾತಿಗೆ ಓಗೊಟ್ಟ ಆಟಗಾರರು ಮುಂದಿನ ಪಂದ್ಯದಲ್ಲಿ ವಿಜೇತರಾದ ಮೇಲೆ ಖುದ್ದು ಪರಾಠ ಮಾಡಲು ಇಳಿದ ಪ್ರೀತಿ 120 ಆಲೂ ಪರಾಠ ಮಾಡಿದ್ದಾಗಿಯೂ, ಇದಾದ ಬಳಿಕ ಮತ್ತೆಂದೂ ಈ ಖಾದ್ಯವನ್ನು ಮಾಡಿಲ್ಲವೆಂದೂ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಹರ್ಭಜನ್ ಸಿಂಗ್, ‘ಇರ್ಫಾನ್ ಪಠಾಣ್ ಒಬ್ಬರೇ 20 ಪರಾಠ ತಿಂದು ಬಿಡುತ್ತಾರೆ,” ಎಂದಿದ್ದಾರೆ. ಖುದ್ದು ತಮಗೂ ಸಹ ಆಲೂ ಪರಾಠ ಎಂದರೆ ಇಷ್ಟವೆಂದು ಭಜ್ಜಿ ಹೇಳುತ್ತಾರೆ.

ಟೀಂ ಇಂಡಿಯಾ ಸೀಮಿತ ಓವರುಗಳ ತಂಡದ ಆರಂಭಿಕ ಶಿಖರ್‌ ಧವನ್‌ ಸಹ ತಮ್ಮ ಚೀಟ್‌ ದಿನಗಳಲ್ಲಿ ಆಲೂ ಪರಾಠಾ ಸವಿಯುತ್ತಾರೆ. ಪಾಕ್ ತಂಡ ಮಾಜಿ ವೇಗಿ ಶೋಯೆಬ್ ಅಖ್ತರ್‌ಗೂ ಆಲೂ ಪರಾಠ ಎಂದರೆ ಇಷ್ಟವಂತೆ.


Spread the love