Spread the love

ಮೈಸೂರು ವಾರಿಯರ್ಸ್ ತಂಡವನ್ನು ಮಣಿಸಿ 2023ರ ಮಹಾರಾಜ ಟ್ರೋಫಿ ಗೆದ್ದ ಹುಬ್ಬಳ್ಳಿ ಟೈಗರ್ಸ್ ತಂಡ. ಮೊಹಮ್ಮದ್‌ ತಾಹ (72 ರನ್) ಮತ್ತು ಮನೀಷ್‌ ಪಾಂಡೆ (50*) ಅವರ ಅರ್ಧಶತಕಗಳ ಬಲದಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಫೈನಲ್‌ ಹಣಾಹಣಿಯಲ್ಲಿ ಮೈಸೂರು ವಾರಿಯರ್ಸ್ ವಿರುದ್ದ 8 ರನ್‌ ರೋಚಕ ಗೆಲುವು ಪಡೆಯಿತು. ಆ ಮೂಲಕ ಚೊಚ್ಚಲ ಮಹಾರಾಜ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಹುಬ್ಬಳ್ಳಿ ಟೈಗರ್ಸ್ ನೀಡಿದ್ದ 204 ರನ್‌ಗಳ ಕಠಿಣ ಗುರಿ ಹಿಂಬಾಲಿಸಿದ ಮೈಸೂರು ವಾರಿಯರ್ಸ್ ತಂಡ ಕೊನೆಯ ಓವರ್‌ವೆರಗೂ ತೀವ್ರ ಪೈಪೋಟಿ ನೀಡಿತು. ಆದರೆ, 20 ಓವರ್‌ಗಳನ್ನು ಪೂರ್ಣಗೊಳಿಸಿದರೂ ಮೈಸೂರು, 8 ವಿಕೆಟ್‌ ನಷ್ಟಕ್ಕೆ 195 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೊದಲೆಳೆಯ ಅಂತರದಲ್ಲಿ ಸೋಲು ಅನುಭವಿಸಿತು. ಇದರೊಂದಿಗೆ ಚೊಚ್ಚಲ ಮಹಾರಾಜ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿತು.

ಇದಕ್ಕೂ ಮುನ್ನ ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಹುಬ್ಬಳ್ಳಿ ಟೈಗರ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 203 ರನ್‌ಗಳನ್ನು ಗಳಿಸಿತು. ಆ ಮೂಲಕ ಮೈಸೂರು ವಾರಿಯರ್ಸ್ ತಂಡಕ್ಕೆ 204 ರನ್‌ಗಳ ಕಠಿಣ ಗುರಿ ನೀಡಿತ್ತು.

ಟೈಗರ್ಸ್ ಪರ ಇನಿಂಗ್ಸ್ ಆರಂಭಿಸಿದ ಲವನೀತ್ ಸಿಸೋಡಿಯಾ ಅವರು, ಕಾರ್ತಿಕ್ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್‌ಗೆ ಜತೆಯಾದ ಕೃಷ್ಣನ್‌ ಶ್ರೀಜಿತ್‌ ಹಾಗೂ ಮೊಹಮ್ಮದ್‌ ತಾಹ ಜೋಡಿ ಮೈಸೂರು ವಾರಿಯರ್ಸ್ ಬೌಲರ್‌ಗಳ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಈ ಇಬ್ಬರೂ ಎರಡನೇ ವಿಕೆಟ್‌ಗೆ 89 ರನ್‌ಗಳನ್ನು ಕಲೆ ಹಾಕಿ ಹುಬ್ಬಳ್ಳಿಗೆ ಭರ್ಜರಿ ಆರಂಭ ತಂದುಕೊಟ್ಟರು.

 


Spread the love