Spread the love

ಕ್ಯಾಂಡಿ: ಏಕದಿನ ಏಷ್ಯಾಕಪ್‌ (Asia Cup 2023) ಕ್ರಿಕೆಟ್‌ ಟೂರ್ನಿ ಆರಂಭವಾಗಿದ್ದು, ತೀವ್ರ ಕುತೂಹಲ ಕೆರಳಿಸಿರುವ ಭಾರತ – ಪಾಕಿಸ್ತಾನ (Ind vs Pak) ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಟ್ವಿಟ್ಟರ್‌ನಲ್ಲೂ ಟ್ರೆಂಡ್ ಅಲೆ ಎದ್ದಿದೆ. ಈ ನಡುವೆ ಪಂದ್ಯಕ್ಕೆ ಮಳೆಯ ಆತಂಕ ಶುರುವಾಗಿದೆ.

ಹೈವೋಲ್ಟೇಜ್ ಪಂದ್ಯಕ್ಕೆ ಶ್ರೀಲಂಕಾದ (Sri Lanka) ಪಲ್ಲೆಕೆಲೆ ಕ್ರೀಡಾಂಗಣ ಸಜ್ಜಾಗಿದೆ. ಉಭಯ ತಂಡಗಳ ಕ್ರಿಕೆಟ್ ಪ್ರಿಯರು ಕಾದು ಕುಳಿತಿದ್ದಾರೆ. ಇತ್ತ ವಿಶ್ವಕಪ್‌ (WorldCup) ಆರಂಭಿಕ ಪಂದ್ಯದಲ್ಲಿ ಅನುಭವಿಸಿದ ವಿರೋಚಿತ ಸೋಲಿನಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ತಂಡ ಕೂಡ ಮಹಾ ಕಸರತ್ತನ್ನೇ ನಡೆಸಿದೆ.

ಸಾವಿರಾರು ಅಭಿಮಾನಿಗಳು ಕ್ಯಾಂಡಿಯಲ್ಲಿ ಹೋಟೆಲ್‌ ರೂಮ್‌ಗಳನ್ನ ಕಾಯ್ದಿರಿಸಿದ್ದಾರೆ. ಭಾರತ-ಪಾಕಿಸ್ತಾನದ (Ind vs Pak) ಕೋಟ್ಯಂತರ ಅಭಿಮಾನಿಗಳು ರಣರೋಚಕ ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ. ಆದ್ರೆ ಹವಾಮಾನ ಇಲಾಖೆ ಇಂಡೋ-ಪಾಕ್‌ ಕದನಕ್ಕೆ ಮಳೆ (Rain) ಅಡ್ಡಿಯಾಗುವ ಮುನ್ಸೂಚನೆ ನೀಡಿದೆ. ಇದು ಅಭಿಮಾನಿಗಳ ಆಸೆಗೂ ತಣ್ಣೀರು ಎರಚಿದಂತಾಗಿದೆ. ಶುಕ್ರವಾರವೂ ಮೋಡ ಕವಿದ ವಾತಾವರಣ ಇದ್ದು, ಶನಿವಾರ 80% ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಕೊಟ್ಟಿದೆ.

ಕಳೆದ ವರ್ಷ ಟಿ20 ಏಷ್ಯಾಕಪ್‌ ಹಾಗೂ ವಿಶ್ವಕಪ್‌ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ಅಭಿಮಾನಿಗಳಿಗೆ ರಸದೌತಣ ನೀಡಿದ್ದವು. ಟಿ20 ಏಷ್ಯಾಕಪ್‌ ಟೂರ್ನಿಯಲ್ಲಿ ಲೀಗ್‌ ಹಂತದಲ್ಲಿ ಭಾರತದ ವಿರುದ್ಧ ಸೋತಿದ್ದ ಪಾಕ್‌ ಸೂಪರ್‌ ಫೋರ್‌ ಹಂತದಲ್ಲಿ ಗೆದ್ದು ಸೇಡುತೀರಿಸಿಕೊಂಡಿತ್ತು. ಈ ಮೂಲಕ ಟೀಂ ಇಂಡಿಯಾ ಫೈನಲ್‌ ತಲುಪುವುದಕ್ಕೂ ಮುಳುವಾಗಿತ್ತು. ಹಾಗಾಗಿ ಈ ಬಾರಿ ಪ್ರಶಸ್ತಿಗೆ ಮುತ್ತಿಡಲೇಬೇಕೆಂದು ಪಣ ತೊಟ್ಟಿರುವ ರೋಹಿತ್‌ ಬಳಕ ಪಾಕ್‌ ತಂಡವನ್ನ ಬಗ್ಗು ಬಡಿಯಲು ಸಜ್ಜಾಗಿದೆ.

ಏಷ್ಯಾಕಪ್ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.

ಏಷ್ಯಾಕಪ್ಗೆ ಪಾಕಿಸ್ತಾನ ತಂಡ:

ಬಾಬರ್ ಆಜಮ್ (ನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕಾರ್ ಅಹ್ಮದ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸ್ ಜೂನಿಯರ್, ನಸೀಮ್ ಶಾ, ಶಾಹೀನ್ ಅಫ್ರಿದಿ, ಸೌದ್ ಶಕೀಲ್, ತಯ್ಯಬ್ ತಾಹಿರ್

 


Spread the love