ಪಾಕಿಸ್ತಾನದ ಖೈಬರ್ ಫಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 11 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡಿದ್ದಾರೆ. ಮಾಲಿ ಖೇಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಬೆಂಗಾವಲು ಪಡೆಗಳ ಬಳಿ ಮೋಟಾರುಬೈಕಿನಲ್ಲಿ ಬಂದಿದ್ದ ವ್ಯಕ್ತಿ ಆತ್ಮಾಹುತಿ ಬಾಂಬ್ ಸ್ಫೋಟಗೊಳಿಸಿದ್ದಾನೆ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನ ಟೆಲಿಗ್ರಾಫ್ ವರದಿ ಮಾಡಿದೆ. ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರು ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಜುಲೈ 30 ರಂದು, ರಾಜಕೀಯ ಪಕ್ಷದ ಸಭೆಯಲ್ಲಿ ಆತ್ಮಹತ್ಯಾ ಬಾಂಬರ್ ಸ್ಫೋಟಗೊಂಡು ಕನಿಷ್ಠ 54 ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 400 ಕ್ಕೂ ಹೆಚ್ಚು JUI-F ಸದಸ್ಯರು ಮತ್ತು ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿದ್ದರು.ಇತ್ತೀಚೆಗಷ್ಟೇ ಆಗಸ್ಟ್ 13ರಂದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಚೀನಾದ ಇಂಜಿನಿಯರ್ಗಳನ್ನು ಹೊತ್ತೊಯ್ಯುತ್ತಿದ್ದ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ನಾಲ್ವರು ಚೀನಾದ ನಾಗರಿಕರು ಮತ್ತು 9 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದರು.