ಇಂದು ನಡೆಯಬೇಕಿರುವ ಭಾರತ ಹಾಗೂ ನೇಪಾಳ ಪಂದ್ಯಕ್ಕೂ ಅಡ್ಡಿಯಾಗುವ ಸಾಧ್ಯತೆ ಇದೆ. ಪಲ್ಲೆಕೆಲೆಯಲ್ಲಿ ಭಾನುವಾರವೂ ಮಳೆ ಸುರಿದಿದ್ದು, ಸೋಮವಾರ ಮಳೆಯಾಗುವ ಸಾಧ್ಯತೆ ಶೇ.80ರಷ್ಟಿದೆ. ಪಂದ್ಯ ರದ್ದಾದರೂ ಭಾರತ ಸೂಪರ್-4 ಹಂತಕ್ಕೆ ಪ್ರವೇಶಿಸಲಿದೆ.
ಮೊದಲ ಪಂದ್ಯದಲ್ಲಿ ಅಗ್ರ ಕ್ರಮಾಂಕ ವೈಫಲ್ಯ ಕಂಡ ಹೊರತಾಗಿಯೂ ಮಧ್ಯಮ ಕ್ರಮಾಂಕ ದಿಟ್ಟ ಹೋರಾಟ ಪ್ರದರ್ಶಿಸಿ ತಂಡ, ಸ್ಪಧಾತ್ಮಕ ಮೊತ್ತ ದಾಖಲಿಸಲು ನೆರವಾಗಿತ್ತು. ಸೂಪರ್-4ಗೂ ಮುನ್ನ ಲಯ ಕಂಡುಕೊಳ್ಳಲು ರೋಹಿತ್, ಗಿಲ್, ಕೊಹ್ಲಿ, ಶ್ರೇಯಸ್ ಈ ಪಂದ್ಯವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇಶಾನ್ ಕಿಶನ್ ಮತ್ತೊಂದು ದೊಡ್ಡ ಇನ್ನಿಂಗ್ಸ್‌ನ ನಿರೀಕ್ಷೆಯಲ್ಲಿದ್ದಾರೆ.
ಪಾಕಿಸ್ತಾನದ ಗುಣಮಟ್ಟದ ಬ್ಯಾಟಿಂಗ್ ಪಡೆಯ ಎದುರು ಬೌಲ್ ಮಾಡುವ ಅವಕಾಶ ಭಾರತೀಯರಿಗೆ ಸಿಗಲಿಲ್ಲ. ಈ ಪಂದ್ಯ ನಡದರೆ ಭಾರತೀಯ ಬೌಲರ್‌ಗಳಿಗೆ ಸೂಪರ್-4ಗೂ ಮುನ್ನ ಕೆಲ ಓವರ್‌ಗಳನ್ನು ಬೌಲ್ ಮಾಡಿ ಅಭ್ಯಾಸ ನಡೆಸಲು ಅನುಕೂಲವಾಗಲಿದೆ. ಜಸ್‌ಪ್ರೀತ್ ಬುಮ್ರಾ ಅಲಭ್ಯರಾಗಲಿರುವ ಕಾರಣ, ಈ ಪಂದ್ಯದಲ್ಲಿ ಮೊಹಮದ್ ಶಮಿ ಅಥವಾ ಪ್ರಸಿದ್ಧ್ ಕೃಷ್ಣ ಪೈಕಿ ಒಬ್ಬರಿಗೆ ಸ್ಥಾನ ಸಿಗಲಿದೆ.
ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನದಿಂದ ಚಚ್ಚಿಸಿಕೊಂಡಿದ್ದ ನೇಪಾಳ, ಈ ಪಂದ್ಯದಲ್ಲಿ ಸುಧಾರಿತ ಆಟವಾಡಲು ಎದುರು ನೋಡುತ್ತಿದೆ.