ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿವಾದ ಕ್ಲೈಮ್ಯಾಕ್ಸ್ ಘಟ್ಟಕ್ಕೆ ತಲುಪಿದೆ. ಇಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿಗೆ ಸಮಯ ನಿಗದಿಯಾಗಿದೆ. ಇಂದು ಗಜೇಂದ್ರ ಸಿಂಗ್ ಅವರನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಸಂಸದರು ಭೇಟಿಯಾಗಲಿದ್ದು, ಕಾವೇರಿ ನದಿ ನೀರಿನ ವಾಸ್ತವ ಸ್ಥಿತಿ ಬಗ್ಗೆ ಚರ್ಚಿಸಲಿದ್ದಾರೆ. ಮತ್ತೊಂದೆಡೆ ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ವಿವಾದದ ಕುರಿತು ಅರ್ಜಿ ವಿಚಾರಣೆ ನಡೆಯಲಿದ್ದು, ಭಾರಿ ಕುತೂಹಲ ಕೆರಳಿಸಿದೆ. ವಸ್ತುಸ್ಥಿತಿಯನ್ನು ಮಂದಿಟ್ಟು,
ಅಂಕಿ ಅಂಶಗಳ ಸಮೇತ ಸಮರ್ಥ ವಾದ ಮಂಡಿಸಲು ರಾಜ್ಯಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಕರ್ನಾಟಕ, ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ಬೆಳಗ್ಗೆ 10:30ಕ್ಕೆ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ನಡೆಯಲಿದೆ. ಇದರ ನಡುವೆ ಕಾವೇರಿ ನೀರಿಗಾಗಿ ರಾಜ್ಯರೈತರ ಪರವಾಗಿ ಸುಪ್ರೀಂಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಕೆಂಪರಾಜು ಮತ್ತು ಆರ್.ಪಿ.ರವಿ ಎಂಬುವರು ರಾಜ್ಯದ ರೈತರ ಪರವಾಗಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲ್ಲಿಸಿರುವ ಅರ್ಜಿಯ ಜತೆಗೆ ರೈತರ ಅರ್ಜಿಯನ್ನು ಸಹ ವಿಚಾರಣೆ ನಡೆಯಲಿದೆ.