Spread the love

ಬೆಂಗಳೂರು ;- ನಗರದಲ್ಲಿ ದಿನೇ ದಿನೇ ಡೆಂಗ್ಯೂ ಸೋಂಕು ತಗುಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 20ರ ನಡುವೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2,182 ಪ್ರಕರಣಗಳು ದಾಖಲಾಗಿವೆ. ಅಂದರೆ ದೈನಂದಿನ ಸರಾಸರಿ 109 ಪ್ರಕರಣಗಳು.

ಆಗಸ್ಟ್ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಬೆಂಗಳೂರು ಪೂರ್ವ, ದಕ್ಷಿಣ ಮತ್ತು ಮಹದೇವಪುರ ವಲಯಗಳಲ್ಲಿ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಈ ತಿಂಗಳು ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗುವುದಿಲ್ಲ. ಏಕೆಂದರೆ ಪ್ರತಿದಿನವೂ ಅಂಕಿಅಂಶಗಳಲ್ಲಿ ಬದಲಾವಣೆಗಳಾಗುತ್ತಿವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಕೆ.ವಿ.ತ್ರಿಲೋಕ್ ಚಂದ್ರ ಅವರು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಜನವರಿ 1 ರಿಂದ ಸೆಪ್ಟೆಂಬರ್ 19 ರವರೆಗೆ 9,208 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 5,220 ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ. ಎರಡನೇ ಮತ್ತು ಮೂರನೇ ಅತಿ ಹೆಚ್ಚು ಡೆಂಗ್ಯೂ ಹರಡುವ ಜಿಲ್ಲೆಗಳಾಗಿ ಮೈಸೂರು ಮತ್ತು ಉಡುಪಿಯನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಈ ವರ್ಷ ಪತ್ತೆಯಾದ ಡೆಂಗ್ಯೂ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು BBMP ಪ್ರದೇಶ ವ್ಯಾಪ್ತಿಯಲ್ಲಿ ಕಂಡುಬಂದಿದೆ. ಆದರೆ ಡೆಂಗ್ಯೂ ಟೆಸ್ಟ್ ಮಾಡಿಸಿದವರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಡೆಂಗ್ಯೂ ಸೋಂಕು ದೃಢಪಟ್ಟವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಪಾಸಿಟಿವಿಟಿ ದರವು ಆಗಸ್ಟ್‌ನಲ್ಲಿ 43% ರಿಂದ ಸೆಪ್ಟೆಂಬರ್‌ನಲ್ಲಿ 13% ಕ್ಕೆ ಇಳಿದಿದೆ” ಎಂದು ಕೆ.ವಿ.ತ್ರಿಲೋಕ್ ಚಂದ್ರ ಅವರು ಹೇಳಿದರು.

Spread the love