ಬೆಂಗಳೂರು;- ಕಾವೇರಿ ವಿವಾದದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸುವ ಅನಿವಾರ್ಯತೆ ಸೃಷ್ಟಿ ಆಗಲಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಿಂದ ತೀವ್ರ ಆಘಾತವಾಗಿದೆ. ಕಾವೇರಿ ವಿವಾದದಲ್ಲಿ ಈ ಹಿಂದೆ ಪಿ.ವಿ.ನರಸಿಂಹರಾವ್, ಡಾ.ಸಿಂಗ್ ಪ್ರಧಾನಿಯಾಗಿದ್ದಾಗ ಮಧ್ಯಪ್ರವೇಶಿಸಿದ್ದರು. ಈಗ ಪ್ರಧಾನಿ ಮೋದಿ ಮಧ್ಯಪ್ರವೇಶಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗಿಲ್ಲ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಹರಿಸಲಾಗಿದೆ. ಆದರೆ ಈಗ ಸಂಕಷ್ಟದ ಕಾಲ, ಸಂಕಷ್ಟಸೂತ್ರದ ಅನ್ವಯ ಪರಿಹಾರ ನೀಡಲಿ. ತಮಿಳುನಾಡಿಗೆ ಮತ್ತೆ ನೀರು ಹರಿಸಿದರೆ ನಾವೆಲ್ಲರೂ ಸಂಕಷ್ಟಕ್ಕೆ ಸಿಲುಕುತ್ತೇವೆ ಎಂದರು.
ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುತ್ತದೆ. ತಮಿಳುನಾಡು, ಕರ್ನಾಟಕ ಸರ್ಕಾರದ ಜೊತೆ ಪ್ರಧಾನಿ ಮಾತಾಡಬೇಕು. ಸಂಕಷ್ಟದ ಸೂತ್ರದ ಅನ್ವಯ ಪ್ರಧಾನಿ ಕರ್ನಾಟಕಕ್ಕೆ ನ್ಯಾಯ ಕೊಡಿಸಬೇಕು. ರಾಜ್ಯದ ಸಂಸದರು ಪ್ರಧಾನಿ ಮೋದಿ ಮನವೊಲಿಸಿ ಮಧ್ಯಸ್ಥಿಕೆಗೆ ಆಗ್ರಹಿಸಲಿ. ಪ್ರತಿ ಹಂತದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ, ಸಹಿಸಲು ಆಗುವುದಿಲ್ಲ. ಕೂಡಲೇ ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ಒದಗಿಸಲಿ ಎಂದರು.