Spread the love

ಸಿಡ್ನಿ: ಬ್ರಿಟನ್‌ ಮೂಲದ ಖ್ಯಾತ ಮೊಸಳೆ ತಜ್ಞ ಆಡಮ್ ಬ್ರಿಟಾನ್, ನಾಯಿಗಳ ಮೇಲೆ ಅತ್ಯಾಚಾರ ಎಸಗಿ ಅವುಗಳನ್ನು ಕೊಂದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಆಸ್ಟ್ರೇಲಿಯಾದಲ್ಲಿ 2022ರ ಏಪ್ರಿಲ್‌ನಲ್ಲಿ ಬಂಧಿತನಾಗಿದ್ದ ಬ್ರಿಟಾನ್, ತನ್ನ ವಿರುದ್ಧದ 60 ಆರೋಪಗಳಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಶ್ವಾನಗಳ ಮೇಲೆ ಅತ್ಯಾಚಾರ ಎಸಗುವ ವಿಡಿಯೋಗಳನ್ನು ಆತ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿದ್ದಲ್ಲದೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವಿಡಿಯೋಗಳನ್ನು ಕೂಡ ಆನ್‌ಲೈನ್‌ನಿಂದ ಪಡೆದುಕೊಂಡು ವೀಕ್ಷಿಸಿದ್ದಾಗಿ ತಿಳಿಸಿದ್ದಾನೆ.18 ತಿಂಗಳಲ್ಲಿ 42 ನಾಯಿಗಳ ಮೇಲೆ ಆತ ದೌರ್ಜನ್ಯ ಎಸಗಿದ್ದಾನೆ. ಅವುಗಳಲ್ಲಿ 39 ಮೃತಪಟ್ಟಿವೆ.

ಪ್ರಸಿದ್ಧ ಪ್ರಾಣಿ ವಿಜ್ಞಾನಿಯಾಗಿರುವ ಬ್ರಿಟಾನ್, ಬಿಬಿಸಿ ಮತ್ತು ನ್ಯಾಷನಲ್ ಜಿಯಾಗ್ರಫಿಕ್‌ನ ಸರಣಿಗಳಲ್ಲಿ ಕೆಲಸ ಮಾಡಿದ್ದಾನೆ. ಒಟ್ಟಾರೆ 60 ಪ್ರಕರಣಗಳಲ್ಲಿ ಈತ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತನ್ನ ಸ್ವಂತ ಜಾಗದಲ್ಲಿ ಶಿಪ್ಪಿಂಗ್ ಕಂಟೇನರ್ ಒಂದನ್ನು ನಿಲ್ಲಿಸಿದ್ದ ಬ್ರಿಟಾನ್, ಅದರ ಒಳಗೆ ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಅದರಲ್ಲಿ ಆತ ರೆಕಾರ್ಡಿಂಗ್ ಸಾಧನ ಅಳವಡಿಸಿದ್ದ. ಅದಕ್ಕೆ ‘ಟಾರ್ಚರ್ ರೂಂ’ ಎಂದು ಕರೆಯುತ್ತಿದ್ದುದ್ದಾಗಿ ಕೋರ್ಟ್‌ಗೆ ತಿಳಿಸಿದ್ದಾನೆ.

ಕನಿಷ್ಠ 2014ರಿಂದ ಪ್ರಾಣಿಗಳ ಕಡೆ ‘ಹಿಂಸಾತ್ಮಕ ಲೈಂಗಿಕ ಆಸಕ್ತಿ’ ಹೊಂದಿದ್ದ ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ. ತನ್ನದೇ ಸಾಕು ನಾಯಿಗಳನ್ನು ಶೋಷಿಸಿದ ನಂತರ, ಬೇರೆ ಶ್ವಾನ ಮಾಲೀಕರಿಂದಲೂ ಅವರ ಸಾಕು ಪ್ರಾಣಿಗಳನ್ನು ಪಡೆದುಕೊಂಡಿದ್ದ. ಪ್ರಯಾಣ ಅಥವಾ ಕೆಲಸದ ಒತ್ತಡಗಳ ಕಾರಣ ತಮ್ಮ ನಾಯಿಗಳನ್ನು ಬಿಟ್ಟುಹೋಗಲು ಸಿದ್ಧರಿರುವ ಮಾಲೀಕರನ್ನು ಆತ ಆನ್‌ಲೈನಲ್ಲಿ ಹುಡುಕುತ್ತಿದ್ದ. ನಂತರ ಅವರು ಪ್ರಾಣಿಗಳನ್ನು ತನ್ನ ವಶದಲ್ಲಿ ಬಿಟ್ಟುಹೋಗುವಂತೆ ನಂಬಲು, ಅವರ ಜತೆ ಉತ್ತಮ ಬಾಂಧವ್ಯ ಬೆಳೆಸುತ್ತಿದ್ದ. ಈತ ಪ್ರಸಿದ್ಧ ಮೊಸಳೆ ತಜ್ಞನಾಗಿರುವುದರಿಂದ ಜನರು ಸುಲಭವಾಗಿ ನಂಬುತ್ತಿದ್ದರು.


Spread the love