Spread the love

ಬೆಂಗಳೂರು:  ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಉಡಾಫೆ ಉತ್ತರವನ್ನು ನೀಡಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಹಬ್ಬದ ವೇಳೆ ಕಲ್ಲು ತೂರಾಟ ನಡೆದಿದ್ದು, ಎರಡು ಧರ್ಮಗಳ ನಡುವೆ ಕೋಮು ಸಂಘರ್ಷ ನಡೆದಿದ್ದರೂ ಇದೆಲ್ಲ ಏನ್‌ ಹೊಸದಾಗಿ ನಡೆದಿದೆಯೇ? ಎಂದು ಹೇಳಿದ್ದಾರೆ.

ಅಂತಹ ಸೂಕ್ಷ್ಮ ಪ್ರದೇಶದಲ್ಲಿ ಮೊದಲೇ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ದೊಡ್ಡ ಪ್ರಮಾಣದ ಗಲಾಟೆ ನಡೆಯುವುದನ್ನು ತಡೆಯಲಾಗಿದೆ. ಸಣ್ಣ ಪ್ರಮಾಣದ ಗಲಾಟೆ ಆಗಿದೆ. ಅದನ್ನು ಅಧಿಕಾರಿಗಳು ನಿಯಂತ್ರಿಸಿದ್ದಾರೆ ಎಂದು ಹೇಳಿದರು.

ಇಡೀ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸುವ ಮೂಲಕ ಪ್ರಚೋದನೆ ನೀಡುತ್ತಾರೆ. ಇದು ಎಲ್ಲಾ ಕಡೆ ಆಗಿದೆ. ಅದನ್ನು ನಮ್ಮ ಅಧಿಕಾರಿಗಳು ನಿಯಂತ್ರಿಸುತ್ತಾರೆ. ಎಲ್ಲೂ ಅಂತಹ ಅಹಿತಕರ ದೊಡ್ಡ ಗಲಾಟೆ ಆಗಲು ಬಿಟ್ಟಿಲ್ಲ. ಪ್ರತಿ ಬಾರಿ ಮೆರವಣಿಗೆ ಮಾಡುವ ಸಂದರ್ಭ ಗಲಾಟೆ ಮಾಡಬೇಡಿ ಎಂದು ತಿಳಿಸುತ್ತಾರೆ. ಅದನ್ನು ಮೀರಿ ಹೋದ್ರೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.


Spread the love