Spread the love

ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಸಿರು ಮಾರ್ಗದಲ್ಲಿ (Green Line) ಸಂಚರಿಸಿದ ರೀ ರೈಲ್‌ ವಾಹನ ಆಯತಪ್ಪಿದ ಹಿನ್ನಲೆಯಲ್ಲಿ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಸರಿಪಡಿಸಲು ಬಳಸುವ ರೀ ರೈಲ್ ರಾಜಾಜಿನಗರ ನಿಲ್ದಾಣದ ತಿರುವಿನಲ್ಲಿ ಹಳಿ ತಪ್ಪಿದ ಪರಿಣಾಮ ಈ ಸಮಸ್ಯೆ ಎದುರಾಗಿದೆ

ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ರೀ-ರೈಲ್ ಮೂಲಕ ಸರಿಪಡಿಸುತ್ತಾರೆ. ಇಲ್ಲಿ ರೀ-ರೈಲ್ ಟ್ರ್ಯಾಕ್ ತಪ್ಪಿ ತೊಂದರೆ ಆಗಿದೆ. ರೀ-ರೈಲ್ ವಾಹನವನ್ನು‌ ಹಳಿಗೆ ತರಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಕಳೆದ ಏಳೆಂಟು ತಾಸುಗಳಿಂದ ದುರಸ್ತಿ ಕಾರ್ಯದಲ್ಲಿ ಇಂಜಿನಿಯರ್​ಗಳು ಬ್ಯುಸಿ ಆಗಿದ್ದಾರೆ. ಹೈಡ್ರಾಲಿಕ್ ಪವರ್ ಬಳಸಿ ರೀ-ರೈಲ್ ಟ್ರ್ಯಾಕ್​ಗೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ದೆಹಲಿ ಎಕ್ಸ್​ಪರ್ಟ್​ಗಳ ಜೊತೆ ಇಲ್ಲಿನ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸ್ತಿದ್ದಾರೆ. ಹಳಿ ತಪ್ಪಿರುವ ರೀ-ರೈಲ್ ಅನ್ನು ಹೇಗೆ ವಾಪಸ್ ತರಬೇಕು ಎಂದು ಸಮಾಲೋಚನೆ ನಡೆಸುತ್ತಿದ್ದಾರೆ.

ಯಶವಂತಪುರ ಮೆಟ್ರೋ ನಿಲ್ದಾಣ ಸಂಪೂರ್ಣ ಫುಲ್ ಆಗಿದ್ದು, ಫ್ಲಾಟ್ ಫಾರಂನಲ್ಲಿ ನಿಲ್ಲೋದಕ್ಕೂ ಜಾಗವಿಲ್ಲ. ಮೆಟ್ರೋಗಾಗಿ ನೂರಾರು ಪ್ರಯಾಣಿಕರು ಕಾದು ನಿಂತಿದ್ದಾರೆ. ಸಂಚಾರದಲ್ಲಿ ಅಡಚಣೆ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಕೆಲವು ಪ್ರಯಾಣಿಕರು ಮೆಟ್ರೋ ಪ್ರವೇಶ ದ್ವಾರವನ್ನ ಕಾಲಿನಿಂದ ಒದ್ದು ಅಸಮಾಧಾನ ಹೊರ ಹಾಕಿದ್ದಾರೆ. ರೈಲು ಸಂಚಾರದಲ್ಲಿ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ರಾಜಾಜಿನಗರ ಮೆಟ್ರೋ ನಿಲ್ದಾಣವನ್ನು ಸದ್ಯ ಬಿಎಂಆರ್​ಸಿಎಲ್ ಬಂದ್ ಮಾಡಿದೆ. ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಕೇವಲ ನಾಗಸಂದ್ರದಿಂದ ಯಶವಂತಪುರ ಹಾಗೂ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ವರೆಗೆ ಮಾತ್ರ ಹಸಿರು ಮಾರ್ಗದಲ್ಲಿ ಮಾತ್ರ ಮೆಟ್ರೋ ಸಂಚಾರ ನಡೆಯುತ್ತಿದೆ.

 


Spread the love