ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ಇಂಗ್ಲೆಂಡ್ ತಂಡದ ಎಲ್ಲ ಬ್ಯಾಟರ್‌ಗಳು ಎರಡಂಕಿಯ ಸ್ಕೋರ್ ಮಾಡಿದ್ದಾರೆ. 6 ದಶಕಗಳ ಇತಿಹಾಸ ಹೊಂದಿರುವ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ ಒಟ್ಟಾರೆ 4658 ಪಂದ್ಯಗಳು ನಡೆದಿದ್ದು, ಈವರೆಗೆ ಯಾವ ಪಂದ್ಯದಲ್ಲೂ ತಂಡದ 11 ಬ್ಯಾಟರ್‌ಗಳು ಎರಡಂಕಿಯ ಸ್ಕೋರ್ ಮಾಡಿದ ಉದಾಹರಣೆ ಇರಲಿಲ್ಲ. ಇದೀಗ ಈ ವಿಶೇಷ ದಾಖಲೆ ಕ್ರಿಕೆಟ್ ಆಟದ ಹರಿಕಾರರಾದ ಇಂಗ್ಲೆಂಡ್ ತಂಡದಿಂದಲೇ ಮೂಡಿಬಂದಿದೆ.
ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಕ್ಟೋಬರ್ 5ರಂದು (ಗುರುವಾರ) ಶುರುವಾದ 2023ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಜೋಸ್ ಬಟ್ಲರ್ ಸಾರಥ್ಯದ ಇಂಗ್ಲೆಂಡ್ ತಂಡ ವಿಶೇಷ ದಾಖಲೆ ನಿರ್ಮಿಸಿದೆ. ಕಳೆದ ಬಾರಿಯ ರನ್ನರ್ಸ್‌ಅಪ್ ನ್ಯೂಜಿಲೆಂಡ್ ಎದುರು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ತನ್ನ ಪಾಲಿನ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 282 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.
ನ್ಯೂಜಿಲೆಂಡ್ ತಂಡದ ಶಿಸ್ತಿನ ಬೌಲಿಂಗ್ ದಾಳಿಯೆದುರು ರನ್ ಹೆಕ್ಕಲು ಕಷ್ಟಪಟ್ಟರೂ, ಬಂದ ಬ್ಯಾಟರ್‌ಗಳೆಲ್ಲಾ ತಮ್ಮ ಕೈಲಾದ ಕೊಡುಗೆ ಸಲ್ಲಿಸಿದರ ಫಲವಾಗಿ ಇಂಗ್ಲೆಂಡ್ 280ರ ಗಡಿ ದಾಟಿತು. ಒಂದು ಹಂತದಲ್ಲಿ 250ರ ಆಜುಬಾಜಿನಲ್ಲಿ ಆಲ್‌ಔಟ್ ಆಗಬೇಕಿದ್ದ ಇಂಗ್ಲೆಂಡ್, ಕೆಳ ಕ್ರಮಾಂಕದ ಬ್ಯಾಟರ್‌ಗಳ ಹೋರಾಟದ ಫಲವಾಗಿ ಸವಾಲಿನ ಮೊತ್ತ ಕಲೆಹಾಕಿತು. ಇದರೊಂದಿಗೆ ನೂತನ ವಿಶ್ವ ದಾಖಲೆ ಕೂಡ ನಿರ್ಮಾಣವಾಯಿತು.