ಮೈಸೂರು: ದಸರಾ ಮಹೋತ್ಸವದ ಹೊಸ್ತಿಲಲ್ಲಿ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಮಹಿಷ ದಸರಾ ಆಚರಣೆಗೆ ಮೈಸೂರು ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದು, ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನೇ ನಿರ್ಬಂಧಗೊಳಿಸಿ ನಿಷೇಧಾಜ್ಞೆ ಹೊರಡಿಸಿದೆ. ಪರಿಣಾಮ ಚಾಮುಂಡಿ ಬೆಟ್ಟದ ಸುತ್ತ ನಾಕಾಬಂಧಿ ಹಾಕಲಾಗಿದ್ದು, ಸಾರ್ವಜನಿಕರು ತೆರಳದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದರಿಂದಾಗಿ ಚಾಮುಂಡಿ ಬೆಟ್ಟದಲ್ಲಿ ನಡೆಯಬೇಕಿದ್ದ ಮಹಿಷನ ಮೂರ್ತಿಗೆ ಪುಷ್ಪಾರ್ಚನೆ , ಮೆರವಣಿಗೆ ರದ್ದಾಗಿದೆ. ಜೊತೆಗೆ ಇದನ್ನು ವಿರೋಧಿಸಿ ಬಿಜೆಪಿ ಆಯೋಜಿಸಿದ್ದ ಚಾಮುಂಡಿಬೆಟ್ಟ ಚಲೋ ಕಾರ್ಯಕ್ರಮವನ್ನು ಹಿಂತೆಗೆದುಕೊಂಡಿದ್ದು, ಎದುರಾಗಬಹುದಾಗಿದ್ದ ಸಂಘರ್ಷ ತಪ್ಪಿದಂತಾಗಿದೆ. ಇನ್ನೂ ಮಹಿಷ ಉತ್ಸವ ಆಚರಣೆಗೆ ಮೈಸೂರು ನಗರದ ಟೌನ್ ಹಾಲ್ ನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಅನುಮತಿ ನೀಡಲಾಗಿದ್ದು, ವೇದಿಕೆ ಕಾರ್ಯಕ್ರಮ ಮಾತ್ರ ನಡೆಯಲಿದೆ.