ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ. ಬಿಗ್ ಬಾಸ್ ನಡುವೆಯೂ ತಪ್ಪದೇ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ (Max) ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದೆ. ಹಾಗಾಗಿ ಫೆಬ್ರವರಿಯಲ್ಲಿ (February) ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿನಿಮಾ ತಂಡವು ಅಧಿಕೃತವಾಗಿ ಮಾಹಿತಿ ನೀಡದೇ ಇದ್ದರೂ, ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿರುವ ಮಾತಿನಂತೆ ಫೆಬ್ರವರಿಗೆ ಮ್ಯಾಕ್ಸ್ ತೆರೆ ಕಾಣಲಿದೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಸುದೀಪ್ ಒಪ್ಪಿಕೊಂಡಿದ್ದರಿಂದ ಮತ್ತು ಅವರೇ ಚಿತ್ರವೊಂದನ್ನು ನಿರ್ದೇಶನ ಮಾಡಬೇಕಾಗಿರುವುದರಿಂದ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಸಿನಿಮಾದ ಶೂಟಿಂಗ್ ಮುಗಿಸಲಿದ್ದಾರಂತೆ.
ಮುಂದಿನ ಸಿನಿಮಾ ನಿರ್ದೇಶನ?
ಕಿಚ್ಚ ಸುದೀಪ್ ನಿರ್ದೇಶನಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಮಾಣಿಕ್ಯ’ ಬಿಡುಗಡೆಯಾಗಿ 10 ವರ್ಷಗಳ ನಂತರ ಸುದೀಪ್ ‘ಕೆಕೆ’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ್ ನಡಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ.