Spread the love

ಅಹಮದಾಬಾದ್: ವಿಶ್ವಕಪ್ (World Cup 2023) ಇತಿಹಾಸದಲ್ಲಿ ಟೀಂ ಇಂಡಿಯಾವನ್ನು (Team India) ಪಾಕ್ (Pakistan) ತಂಡ ಸೋಲಿಸಿಲ್ಲ. ಇಲ್ಲಿಯವರೆಗೂ ಮುಖಾಮುಖಿಯಾಗಿರುವ 7 ಪಂದ್ಯಗಳ ಪೈಕಿ ಭಾರತ ತಂಡ ಎಲ್ಲಾ ಪಂದ್ಯಗಳನ್ನು ಗೆದ್ದು 7-0 ಅಂತರದಲ್ಲಿ ಮುಂದಿದೆ. ಇದರ ಹೊರತಾಗಿಯೂ ಭಾರತ ತಂಡದ ವಿರುದ್ಧ ಉತ್ತಮವಾಗಿ ಬ್ಯಾಟ್ ಬೀಸಿ ಗೆಲ್ಲುವ ವಿಶ್ವಾಸವನ್ನು ಪಾಕ್ ತಂಡದ ನಾಯಕ ಬಾಬರ್ ಅಜಂ (Babar Azam) ವ್ಯಕ್ತಪಡಿಸಿದ್ದಾರೆ. ದಾಖಲೆಗಳಿರುವುದೇ ಮುರಿಯಲು ಈ ಬಾರಿ ಆ ದಾಖಲೆಯನ್ನು ಮುರಿಯುತ್ತೇವೆ ಎಂದು ಅವರು ಹೇಳಿದ್ದಾರೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕ್ ತಂಡಗಳು ಶನಿವಾರ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೆಣಸಲಿವೆ. ಈ ಪಂದ್ಯದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಾಬರ್ ಆಝಮ್ ಮಾತಾಡಿದ್ದಾರೆ. ಈ ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ನಾವು ಗಮನ ಕೊಡುವುದಿಲ್ಲ. ಮುಂದೆ ಏನು ಬರಲಿದೆ ಎಂಬುದರ ಬಗ್ಗೆ ಗಮನ ಹರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಗಮನ ಕೊಡುತ್ತೇನೆ. ದಾಖಲೆಗಳು ಇರುವುದೇ ಮುರಿಯಲು, 0-7 ಈ ಹಿಂದೆ ಇದ್ದ ದಾಖಲೆಯನ್ನು ನಾವು ಮುರಿಯುತ್ತೇವೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆಂಬ ಬಗ್ಗೆ ನಮಗೆ ವಿಶ್ವಾಸವಿದೆ ಎಂದಿದ್ದಾರೆ.


Spread the love