ಟೆಲ್ ಅವಿವ್: ಇಸ್ರೇಲ್ನ ಸಾದ್ ಕಫಾರ್ನಲ್ಲಿನ ಕಿಬ್ಬುಟ್ಸ್ನಲ್ಲಿ (ಕೃಷಿ ಸಮುದಾಯ) ಇರುವ ಪ್ರಾಥಮಿಕ ಶಾಲೆ ಹಾಗೂ ಯುವಜನ ಕೇಂದ್ರದ ಮೇಲೆ ದಾಳಿ ನಡೆಸಿ, ಸಾಧ್ಯವಾದಷ್ಟು ಜನರನ್ನು ಕೊಲ್ಲುವುದು ಹಾಗೂ ಒತ್ತೆಯಾಳುಗಳನ್ನು ಸೆರೆಹಿಡಿಯುವುದು, ತ್ವರಿತವಾಗಿ ಅವರನ್ನು ಗಾಜಾ ಪಟ್ಟಿಯೊಳಗೆ ಕರೆತರುವುದಕ್ಕೆ ಹಮಾಸ್ ಉಗ್ರ ಸಂಘಟನೆಯು ವಿಸ್ತೃತವಾದ ಯೋಜನೆ ರೂಪಿಸಿತ್ತು ಎನ್ನುವುದು ದಾಖಲೆಗಳಿಂದ ಬಹಿರಂಗವಾಗಿದೆ ಎಂದು ಎನ್ಬಿಸಿ ವರದಿ ಮಾಡಿದೆ.
ಈ ದಾಳಿ ಯೋಜನೆಗೆ ಅರೇಬಿಕ್ನಲ್ಲಿ ‘ಟಾಪ್ ಸೀಕ್ರೆಟ್’ ಎಂದು ಕರೆಯಲಾಗಿತ್ತು. ನಾಗರಿಕರು ಹೆಚ್ಚಾಗಿ ಸೇರುವ ಜಾಗಗಳನ್ನು ಗುರಿಯಾಗಿಸಿ, ಹಳ್ಳಿಗಳನ್ನು ಸುತ್ತುವರಿಯುವುದು ಮತ್ತು ಅವುಗಳ ಒಳಗೆ ನುಗ್ಗುವುದಕ್ಕೆ ತರಬೇತಿ ಹೊಂದಿದ ಎರಡು ಹಮಾಸ್ ಘಟಕಗಳಿಗೆ ಆದೇಶ ನೀಡಲಾಗಿತ್ತು. ಈ ದಾಳಿಯಲ್ಲಿ ಕಫಾರ್ ಸಾದ್ನಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯನ್ನು ನಿಖರವಾಗಿ ತಿಳಿದುಕೊಳ್ಳುವುದು ಇಸ್ರೇಲ್ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
120ಕ್ಕೂ ಅಧಿಕ ನಾಗರಿಕರನ್ನು ಗಾಜಾದಲ್ಲಿ ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎಂದು ಇಸ್ರೇಲಿ ರಕ್ಷಣಾ ಪಡೆಗಳು ಖಚಿತಪಡಿಸಿವೆ. ಇಸ್ರೇಲ್ ನಡೆಸಿದ ಪ್ರತಿ ದಾಳಿಯಲ್ಲಿ ಮೃತಪಟ್ಟ ಹಮಾಸ್ ಉಗ್ರರ ದೇಹಗಳಲ್ಲಿ ಪತ್ತೆಯಾದ ದಾಖಲೆಗಳಲ್ಲಿ ವಿವರವಾದ ನಕಾಶೆಗಳು ದೊರಕಿದ್ದು, ನಾಗರಿಕರನ್ನು ಕೊಲ್ಲುವ ಅಥವಾ ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವ ಹಮಾಸ್ ಉದ್ದೇಶವನ್ನು ಬಹಿರಂಗಪಡಿಸಿವೆ.