Spread the love

ನ್ನಡ ಚಿತ್ರರಂಗಕ್ಕೆ ಅದೇನಾಗಿದೆಯೋ ಗೊತ್ತಿಲ್ಲ, ಒಂದು ಕಡೆ ಒಳ್ಳೆಯ ಸಿನಿಮಾಗಳು ಕೂಡ ಗೆಲ್ಲುತ್ತಿಲ್ಲ, ಮತ್ತೊಂದು ಕಡೆ ನಟ, ನಿರ್ದೇಶಕರ ಸಾಲು ಸಾಲು ಸಾವುಗಳು ನಿಲ್ಲುತ್ತಿಲ್ಲ. ಮಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಗುರುಪ್ರಸಾದ್ ತಮ್ಮ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.

ಸ್ಯಾಂಡಲ್‌ವುಡ್ ಪ್ರತಿಭಾವಂತ ನಿರ್ದೇಶಕನನ್ನು ಕಳೆದುಕೊಂಡಿದೆ.

ಮಠ ಸಿನಿಮಾ ಮೂಲಕ ಚಂದನವನದಲ್ಲಿ ತನ್ನದೇ ಛಾಪು ಮೂಡಿಸಿದ ನಿರ್ದೇಶಕ ಗುರುಪ್ರಸಾದ್. ವಿಡಂಬನಾತ್ಮಕವಾಗಿ ಸಮಾಜವನ್ನು ತೋರಿಸಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಿರಿಯ ನಟ ಜಗ್ಗೇಶ್ ಎರಡನೇ ಇನ್ನಿಂಗ್ಸ್ ಆರಂಭಿಸಲು, ಗೆಲುವಿನ ಹಳಿಗೆ ಮರಳಿದ್ದು ಇದೇ ಮಠ ಸಿನಿಮಾದಿಂದ.

ಇಂದಿಗೂ ಮಠ ಕನ್ನಡ ಚಿತ್ರರಂಗದ ವಿಶೇಷ ಸಿನಿಮಾಗಳಲ್ಲಿ ಒಂದು. ಉತ್ತಮ ಕಂಟೆಂಟ್ ಇದ್ದರೆ ಕಡಿಮೆ ಬಜೆಟ್‌ನಲ್ಲೂ ಸಿನಿಮಾ ಮಾಡಿ ಗೆಲ್ಲಿಸಬಹುದು ಎನ್ನುವುದನ್ನು ಗುರುಪ್ರಸಾದ್ ತೋರಿಸಿಕೊಟ್ಟಿದ್ದರು. ಅವರ ಎದ್ದೇಳು ಮಂಜುನಾಥ ಸಿನಿಮಾ ಕೂಡ ಉತ್ತಮ ಯಶಸ್ಸು ಪಡೆದುಕೊಂಡಿತ್ತು.

ನಟ ಜಗ್ಗೇಶ್‌ರ ಸಿನಿಮಾಗಳು ಸಾಲ ಸಾಲಾಗಿ ಸೋಲು ಕಾಣುತ್ತಿದ್ದ ದಿನಗಳು, ಅವರಿಗೆ ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾಗುತ್ತಿತ್ತು. ಜಗ್ಗೇಶ್‌ರನ್ನು ಒಂದೇ ತರನಾದ ಪಾತ್ರಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ ನಿರ್ದೇಶಕ ಗುರುಪ್ರಸಾದ್ ಮಠ ಸಿನಿಮಾದಲ್ಲಿ ಜಗ್ಗೇಶ್‌ರ ಅಭಿನಯ ಸಾಮರ್ಥ್ಯವನ್ನು ಬಳಸಿಕೊಂಡರು.

ಮಠ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಪಡೆದಿತ್ತು. ಜಗ್ಗೇಶ್ ಮತ್ತು ಗುರುಪ್ರಸಾದ್ ಜೋಡಿ ಮತ್ತೊಮ್ಮೆ ಎದ್ದೇಳು ಸಿನಿಮಾಗಾಗಿ ಒಂದಾಯಿತು. ಎದ್ದೇಳು ಮಂಜುನಾಥ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ತಯಾರಾದರು ನಿರ್ಮಾಪಕರಿಗೆ ಲಾಭ ಮಾಡಿಕೊಟ್ಟಿತು. ಉತ್ತಮ ಚಿತ್ರಕಥೆಗಾಗಿ ಈ ಸಿನಿಮಾಗೆ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ ಕೂಡ ಸಿಕ್ಕಿತ್ತು.

ಆ ಬಳಿಕ ಧನಂಜಯ ಜೊತೆ ಡೈರೆಕ್ಟರ್ಸ್ ಸ್ಪೆಷಲ್ ಎನ್ನುವ ಸಿನಿಮಾ ಮಾಡಿದರು ಈ ಸಿನಿಮಾ ಅಷ್ಟೇನು ಯಶಸ್ಸು ಕಾಣಲಿಲ್ಲ. ಬಳಿಕ ಧನಂಜಯ ಅವರ ಜೊತೆಯೇ ಎರಡನೇ ಸಲ ಎನ್ನುವ ಮತ್ತೊಂದು ಸಿನಿಮಾ ಮಾಡಿದರು. ಆ ಸಿನಿಮಾ ಕೂಡ ನಿರೀಕ್ಷೆ ಮಾಡಿದಷ್ಟು ಹಿಟ್ ಆಗಲಿಲ್ಲ. ಈ ನಡುವೆ ಧನಂಜಯರನ್ನು ಐರನ್ ಲೆಗ್ ಎಂದು ಕರೆದು ವಿವಾದ ಮಾಡಿಕೊಂಡರು

ಹಲವು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಜಗ್ಗೇಶ್‌ ಜೊತೆ ಕೈಜೋಡಿಸಿದ ಗುರುಪ್ರಸಾದ್ ರಂಗನಾಯಕ ಎನ್ನುವ ಸಿನಿಮಾ ಮಾಡಿದರು. ಈ ಸಿನಿಮಾ ಹೀನಾಯ ಸೋಲು ಕಂಡಿತು. ಸಿನಿಮಾದಲ್ಲಿನ ಕೆಲವು ಡೈಲಾಗ್, ದೃಶ್ಯಗಳ ಬಗ್ಗೆ ವಿವಾದ ಕೂಡ ಶುರುವಾದ ಕಾರಣ, ಜಗ್ಗೇಶ್ ಈ ಸಿನಿಮಾದಲ್ಲಿ ನಾನು ನಟ ಮಾತ್ರ ಇನ್ಯಾವ ಸಂಬಂಧವೂ ಇಲ್ಲ ಎಂದು ಹೇಳಿ ದೂರವುಳಿದರು.

ಕ್ರೌಡ್ ಫಂಡಿಂಗ್ ಮೂಲಕ ಸಿನಿಮಾ ಮಾಡುತ್ತೇನೆ ಎಂದು ಹೇಳುತ್ತಿದ್ದ ಗುರುಪ್ರಸಾದ್, ರಂಗನಾಯಕ ಸಿನಿಮಾ ಸೋಲಿನಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಜೊತೆಗೆ ಸಾಲ ಮಾಡಿಕೊಂಡಿದ್ದರಿಂದ, ಹಲವು ಸಾಲಗಾರರು ಕಿರುಕುಳ ಕೊಡುತ್ತಿದ್ದರು ಎಂದು ಹೇಳಲಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.


Spread the love