Spread the love

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕನ್ನಡ, ಕನ್ನಡಿಗರನ್ನು ಹಿಯಾಳಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ.ಇದನ್ನು ನಾಡ ದ್ರೋಹವೆಂದು ಪರಿಗಣಿಸಿ ಕಿಡಿಗೇಡಿಗಳ ವಿರುದ್ಧ ನಮ್ಮ ಸರ್ಕಾರ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ.

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.

ಕನ್ನಡಿಗರನ್ನು ಅವಹೇಳನ ಮಾಡುವುದನ್ನೂ ನಾವು ಎಂದಿಗೂ ಸಹಿಸುವುದಿಲ್ಲ. ಇದಕ್ಕೆ ಕಡಿವಾಣ ಹಾಕುತ್ತೇವೆ. ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ಕಿದೆ. ಕನ್ನಡಿಗರು ಕನ್ನಡವನ್ನು ವ್ಯವಹಾರಿಕ ಭಾಷೆಯಾಗಿ ಬಳಸುವ ಜತೆಗೆ ಇತರರ ಜತೆಗೂ ಕನ್ನಡದಲ್ಲಿಯೇ ಮಾತನಾಡುತ್ತೇವೆ ಎಂದು ಶಪಥ ಮಾಡಬೇಕು. ಪರಭಾಷಿಗರಿಗೂ ಕನ್ನಡ ಕಲಿಸುವ ಪ್ರಯತ್ನ ಮಾಡಬೇಕು. ಕನ್ನಡ ನೆಲದ ನೀರು, ಗಾಳಿ, ಆಹಾರ ಸೇವಿಸಿದ ಮೇಲೆ ಅವರು ಯಾವುದೇ ಭಾಷಿಗರಾಗಿರಲಿ, ಜಾತಿಯವರಾಗಿರಲಿ, ಧರ್ಮದವರಾಗಲಿ ಕನ್ನಡಿಗರೇ ಆಗುತ್ತಾರೆ ಎಂದು ಸಿಎಂ ಹೇಳಿದರು. ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಚಿವ ಮಧು ಬಂಗಾರಪ್ಪ, ಶಾಸಕರಾದ ರಿಜ್ವಾನ್​ ಅರ್ಷದ್​, ಎನ್​.ಎ.ಹ್ಯಾರಿಸ್​ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ಡಾ.ಶಾಲಿನ ರಜನೀಶ್​ ಮತ್ತಿತರರಿದ್ದರು.

ಭಾಷೆ ಬಗ್ಗೆ ಅಭಿಮಾನ ಇರಲಿ:
ನಮ್ಮ ಭಾಷೆಯನ್ನು ಬಲಿಕೊಟ್ಟು ಉದಾರಿಗಳಾಗಬಾರದು. ಭಾಷಾ ವ್ಯಾಮೋಹ ಬೇಡ. ಆದರೆ, ಅಭಿಮಾನವಿರಲಿ. ದುರಾಭಿಮಾನ ಬೆಳೆಯದಿರಲಿ. ಭಾಷಾ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಕನ್ನಡಿಗರಾಗಿ ಕನ್ನಡವನ್ನು ಮರೆಯದೆ, ಮಾತನಾಡಬೇಕು. ಭಾಷೆಯನ್ನು ಉಳಿಸಿ ಬೆಳೆಸಲು ಮೊದಲು ಕನ್ನಡಿಗರಾಗಿ, ಕನ್ನಡೇತರಿಗೆ ಕನ್ನಡ ಕಲಿಸುವ ಪ್ರಯತ್ನ ಮೂಲಕ ಕನ್ನಡ ವಾತಾವರಣ ನಿರ್ಮಿಸುವಂತೆ ರಾಜ್ಯದ ಜನತೆಗೆ ಸಿಎಂ ಕರೆ ನೀಡಿದರು. ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯದಲ್ಲಿ ಪ್ರತಿ ದಿನ 57 ಲ ಶಾಲಾ ಮಕ್ಕಳಿಗೆ ವಾರದ ಆರೂ ದಿನಗಳು ಮೊಟ್ಟೆ ಹಾಗೂ ಚಿಕ್ಕಿ ನೀಡಲಾಗುತ್ತಿದೆ. ಹಾಲಿನ ಜೊತೆಗೆ ರಾಗಿಮಾಲ್ಟ್​ ಸಹ ಕೊಡಲಾಗುತ್ತಿದೆ. ಅಲ್ಲದೆ, ಗುಣಮಟ್ಟ ಶಿಣ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಕೇಂದ್ರದ ವಿರುದ್ಧ ಆಕ್ರೋಶ:
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರುವ ತೆರಿಗೆ ಪಾಲನ್ನು ನೀಡದೆ ಅನ್ಯಾಯ ಮಾಡುತ್ತಿದೆ. ಇಂತಹ ಅನ್ಯಾಯದ ನಡುವೆಯೂ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ರಾಜ್ಯದ ಪರ ಧ್ವನಿ ಎತ್ತುವಂತಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ‘ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವಲ್ಲಿ ಕರ್ನಾಟಕ 2ನೇ ರಾಜ್ಯವಾಗಿದೆ. ವರ್ಷಕ್ಕೆ 4 ಲಕ್ಷ ಕೋಟಿ ರೂ. ಹೆಚ್ಚು ತೆರಿಗೆ ನೀಡಿದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ತೆರಿಗೆ ಪಾಲು 50&60 ಸಾವಿರ ಕೋಟಿ ರೂ. ಮಾತ್ರ. ಕನ್ನಡ ನಾಡು ಮುಂದುವರೆದಿದೆ ಎಂದು ನಮಗೆ ಅನ್ಯಾಯವೆಸಗಲಾಗುತ್ತಿದೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ಒಕ್ಕೂಟ ವ್ಯವಸ್ಥೆ, ಸಂವಿಧಾನ ಒಪ್ಪಿಕೊಂಡಿದ್ದೇವೆ. ನ್ಯಾಯಯುತವಾಗಿ ರಾಜ್ಯದ ತೆರಿಗೆ ಪಾಲು ಕೇಳಿದರೆ, ರಾಜಕೀಯ ಬಣ್ಣ ಬಳಿಯಲಾಗುತ್ತಿದೆ. ಹಾಗಾಗಿ, ನಮ್ಮ ಹಕ್ಕಿಗಾಗಿ ಹೋರಾಡಬೇಕಿದೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕರ್ನಾಟಕ ಮತ್ತು ಕನ್ನಡಪರ ಧ್ವನಿ ಎತ್ತಿ ರಾಜ್ಯಕ್ಕೆ ನ್ಯಾಯ ದೊರೆಯಲಿದೆ ಎಂದರು.

ಕನ್ನಡ ಭಾಷೆಯನ್ನು ಬದುಕಿನ ಭಾಷೆಯಾಗಿ ಮಾಡುವುದೇ ನಮ್ಮ ಗುರಿ. ಬದುಕು ನೀಡಿದ ಕರ್ಮ ಭೂಮಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು. ಕನ್ನಡಿಗರಾಗಿ ಬದುಕಿನ ಪ್ರತಿ ಣ ಕನ್ನಡವನ್ನೇ ಉಸಿರಾಗಿಸಿಕೊಳ್ಳಬೇಕು. ಈ ವರ್ಷ ಬೆಂಗಳೂರು ನಗರದಲ್ಲಿ ಎಲ್ಲ ಖಾಸಗಿ ಸಂಸ್ಥೆಗಳು, ಶಾಲಾ, ಕಾಲೇಜು ಹಾಗೂ ವಿದ್ಯಾಸಂಸ್ಥೆಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಆದೇಶ ಮಾಡಿದ್ದೇವೆ. ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ. ಇದೇ ನಮ್ಮ ವಿಶೇಷತೆ. ಈ ಹಿನ್ನೆಲೆಯಲ್ಲಿ ವಿಶ್ವದ ಎಲ್ಲಾ ಭಾಗದ ಜನರು ಬಂದು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.


Spread the love