ಏಷ್ಯಾಕಪ್&ವಿಶ್ವಕಪ್ ತಂಡಗಳಲ್ಲಿ ಸ್ಥಾನ ಪಡೆಯದೆ ನಿರಾಸೆ ಅನುಭವಿಸಿರುವ ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಈಗ ಇಂಗ್ಲೆಂಡ್ನತ್ತ ಮುಖ ಮಾಡಿದ್ದು, ಕೌಂಟಿ ಚಾಂಪಿಯನ್ಷಿಪ್ನಲ್ಲಿ ಕೆಂಟ್ ತಂಡದ ಪರ ಆಡಲು ಸಿದ್ಧರಾಗಿದ್ದಾರೆ.
ಇಂಗ್ಲಿಷ್ ಕೌಂಟಿ ಕ್ರಿಕೆಟ್ ಆಡುವುದು ನನಗೆ ಅತ್ಯಂತ ಕಾತರದ ಸವಾಲೆನಿಸಿದೆ. ನಾನಿದನ್ನು ಎದುರು ನೋಡುತ್ತಿದ್ದೇನೆ’ ಎಂದು 33 ವರ್ಷದ ಚಾಹಲ್ ಹೇಳಿದ್ದಾರೆ.
ತವರಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿರುವ ನಡುವೆ ಚಾಹಲ್ ವೈಟ್ಬಾಲ್ನಿಂದ ರೆಡ್ಬಾಲ್ ಕ್ರಿಕೆಟ್ನತ್ತ ಗಮನಹರಿಸಿರುವುದು ಅಚ್ಚರಿ ಎನಿಸಿದೆ. ದೇಶೀಯ ಕ್ರಿಕೆಟ್ನಲ್ಲೂ ಅವರು ಹೆಚ್ಚಿನ ಪ್ರಥಮ ದರ್ಜೆ ಪಂದ್ಯ ಆಡಿದವರಲ್ಲ. ಕಳೆದ ರಣಜಿ ಟ್ರೋಫಿಯಲ್ಲಿ ಹರಿಯಾಣ ಪರ ಕೇವಲ 2 ಪಂದ್ಯ ಆಡಿದ್ದರು. 33 ಪ್ರಥಮ ದರ್ಜೆ ಪಂದ್ಯಗಳಲ್ಲಿ 87 ವಿಕೆಟ್ಗಳನ್ನಷ್ಟೇ ಗಳಿಸಿದ್ದಾರೆ. ಭಾರತ ಪರ ಎಂದೂ ಟೆಸ್ಟ್ ಆಡಿದವರಲ್ಲ.
ಸೀಮಿತ ಓವರ್ ಕ್ರಿಕೆಟ್ನಲ್ಲಿ ಚಾಹಲ್ ರಿಸ್ಟ್ ಸ್ಪಿನ್ನಿಂದ ಹೆಚ್ಚಿನ ಯಶ ಕಂಡಿದ್ದಾರೆ. 72 ಏಕದಿನ ಪಂದ್ಯಗಳಲ್ಲಿ 121 ವಿಕೆಟ್ ಮತ್ತು 80 ಟಿ20 ಪಂದ್ಯಗಳಲ್ಲಿ 96 ವಿಕೆಟ್ ಕಬಳಿಸಿದ್ದಾರೆ. 2019ರ ವಿಶ್ವಕಪ್ನಲ್ಲಿ ಆಡಿದ್ದ ಚಾಹಲ್ ನಂತರದಲ್ಲಿ 2021ರ ಟಿ20 ವಿಶ್ವಕಪ್ಗೆ ಕಡೆಗಣಿಸಲ್ಪಟ್ಟಿದ್ದರು. 2022ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಒಂದೂ ಪಂದ್ಯ ಆಡುವ ಅವಕಾಶ ಪಡೆದಿರಲಿಲ್ಲ.