Spread the love

ಭಾನುವಾರ (ಸೆ.10) ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಸೂಪರ್‌ 4 ಹಂತದ ಪಂದ್ಯ ಮಳೆ ಕಾರಣ ಒಂದು ದಿನಕ್ಕೆ ಮುಂದೂಡಲ್ಪಟ್ಟಿತು. ಭಾನುವಾರ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ 24.1 ಓವರ್‌ಗಳಲ್ಲಿ 147/2 ರನ್‌ ಗಳಿಸಿದ್ದಾಗ ಮಳೆ ಸುರಿದ ಕಾರಣ ಆಟ ನಡೆಸಲು ಸಾಧ್ಯವಾಗಲಿಲ್ಲ. ಆಗ ಪಾಕ್‌ ಪರ ಸ್ಟಾರ್‌ ವೇಗದ ಬೌಲರ್‌ ಹ್ಯಾರಿಸ್‌ ರೌಫ್‌, 5 ಓವರ್‌ಗಳಲ್ಲಿ 27 ರನ್‌ ಕೊಟ್ಟಿದ್ದರು. ಆದರೆ, ಮೀಸಲು ದಿನದಲ್ಲಿ ಹ್ಯಾರಿಸ್‌ ಕಣಕ್ಕಿಳಿಯಲೇ ಇಲ್ಲ.

“ಏಷ್ಯಾ ಕಪ್‌ ಟೂರ್ನಿಯ ಸೂಪರ್‌ 4 ಹಂತದಲ್ಲಿನ ಭಾರತ ವಿರುದ್ಧದ ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ ಉಳಿದ ಓವರ್‌ಗಳನ್ನು ಬೌಲ್‌ ಮಾಡುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾನುವಾರ ಬೌಲಿಂಗ್‌ ವೇಳೆ ಅವರು ಸ್ನಾಯು ಸೆಳೆತ ಎದುರಿಸಿದ್ದಾರೆ. ಮುಂಜಾಗ್ರತೆಯ ದೃಷ್ಟಿಯಲ್ಲಿ ಅವರನ್ನು ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಲಾಗಿದೆ. ಯಾವುದೇ ಗಂಭೀರ ಗಾಯದ ಸಮಸ್ಯೆ ಇಲ್ಲ. ಹೀಗಾಗಿ ವಿಶ್ರಾಂತಿ ಅಗತ್ಯದ ಕೊಡುವ ದೃಷ್ಟಿಯಿಂದ ಉಳಿದ ಓವರ್‌ಗಳನ್ನು ಎಸೆಯದೇ ಇರುವಂತೆ ಎಚ್ಚರಿಕೆ ವಹಿಸಲಾಗಿದೆ. ಅವರ ಸ್ಥಿತಿಗತಿ ಬಗ್ಗೆ ವೈದ್ಯಕೀಯ ತಂಡ ಹದ್ದಿನ ಕಣ್ಣಿಟ್ಟಿದೆ,” ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ಹ್ಯಾರಿಸ್‌ ರೌಫ್‌ ಅವರ ಪಕ್ಕೆಗಳಲ್ಲಿ ನೋವು ಕಾಣಿಸಿಕೊಂಡಿದೆ. ಸ್ಕ್ಯಾನಿಂಗ್‌ ವರದಿಯಲ್ಲಿ ಉರಿಯೂತದ ಸುಳಿವು ಸಿಕ್ಕಿದೆ. ವಿಶ್ವಕಪ್‌ ಹತ್ತಿರದಲ್ಲಿ ಇರುವ ಕಾರಣ ಅವರಿಗೆ ಅಗತ್ಯದ ವಿಶ್ರಾಂತಿ ಕೊಡಲು ನಿರ್ಧರಿಸಲಾಗಿದೆ. ಹೀಗಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ಅವರ ಉಳಿದ ಓವರ್‌ಗಳನ್ನು ತಂಡದ ಉಳಿದ ಬೌಲರ್‌ಗಳು ಎಸೆಯಲಿದ್ದಾರೆ. ಭಾನುವಾರ ನಮ್ಮ ತಂಡದ ಬೌಲಿಂಗ್‌ ಹೇಳಿಕೊಳ್ಳುವಂತ್ತಿರಲಿಲ್ಲ. ಹೀಗಾಗಿ ಹೆಚ್ಚು ರನ್‌ ಬಿಟ್ಟುಕೊಟ್ಟೆವು,” ಎಂದು ಸೋಮವಾರ ಆಟ ಶುರುವಾಗುವ ಮುನ್ನ ಮಾತನಾಡಿದ ಅಲ್ಬಿ ಮಾರ್ಕೆಲ್‌ ಹೇಳಿದರು.

 


Spread the love