ಜಸ್ಟಿನ್ ಅವರ ಈ ಹೇಳಿಕೆಯನ್ನು ತೀಕ್ಷ್ಣ ಶಬ್ದಗಳಿಂದ ಖಂಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ‘ಕೆನಡಾದಲ್ಲಿ ನಡೆದಿರುವ ಕೊಲೆ ಪ್ರಕರಣವೊಂದಕ್ಕೆ ಹಾಗೂ ಅಲ್ಲಿ ನಡೆಯುವ ವಿಧ್ವಂಸಕ ಕೃತ್ಯಗಳಿಗೆ ಭಾರತದ ಹೆಸರನ್ನು ಥಳುಕು ಹಾಕುವಂಥ ಹೇಳಿಕೆಯನ್ನು ಕೆನಡಾ ಪ್ರಧಾನಿ ಹಾಗೂ ಅಲ್ಲಿನ ವಿದೇಶಾಂಗ ಸಚಿವರು ನೀಡಿದ್ದು, ಆ ಹೇಳಿಕೆಗಳು ಅಸಂಬದ್ಧವಾಗಿವೆ ಹಾಗೂ ದುರುದ್ದೇಶ ಪೂರಿತವಾಗಿವೆ. ನಮ್ಮದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ದೇಶವಾಗಿದ್ದು, ಕಾನೂನು – ಸುವ್ಯವಸ್ಥೆಯನ್ನು ಪಾಲಿಸುವ ಬದ್ಧತೆಯನ್ನು ಹೊಂದಿರುವ ರಾಷ್ಟ್ರವಾಗಿದೆ’ ಎಂದು ಹೇಳಿದೆ.
‘ಕೆನಡಾ ಪ್ರಧಾನಿಯವರು ಈ ಹಿಂದೆಯೂ ನಮ್ಮ ಪ್ರಧಾನಿಯವರ ವಿರುದ್ಧ ಇಂಥದ್ದೇ ಮಾತುಗಳನ್ನಾಡಿದ್ದರು. ಅವೆಲ್ಲವನ್ನೂ ಭಾರತ ಸಾರಾಸಗಟಾಗಿ ನಿರಾಕರಿಸಿತ್ತು. ಈಗ ಮಾಡಿರುವ ಆರೋಪವನ್ನೂ ಅದೇ ರೀತಿ ತಿರಸ್ಕರಿಸುತ್ತಿದ್ದೇವೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ಹಾಗೂ ಅಖಂಡ ಭಾರತವನ್ನು ವಿಭಜನೆ ಮಾಡುವ ಕುತ್ಸಿತ ಮನಸ್ಸುಗಳುಳ್ಳ ವ್ಯಕ್ತಿಗಳಿಗೆ ಕೆನಡಾ ಸರ್ಕಾರ ಆಶ್ರಯ ನೀಡಿದೆ. ಈ ಬಗ್ಗೆ ಭಾರತ, ಮೊದಲಿನಿಂದಲೂ ಕೆನಡಾ ದೇಶವನ್ನು ಎಚ್ಚರಿಸುತ್ತಾ ಬಂದಿದ್ದರೂ ಭಾರತದ ಕಾಳಜಿಯನ್ನು ಕೆನಡಾ ಅವಗಣನೆ ಮಾಡುತ್ತಲೇ ಬಂದಿದೆ’ ಎಂದು ತನ್ನ ಪ್ರಕಟಣೆಯಲ್ಲಿ ಭಾರತದ ವಿದೇಶಾಂಗ ಸಚಿವಾಲಯ, ಕೆನಡಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
‘ಕೆನಡಾದಲ್ಲಿ ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ ಕೊಟ್ಟಿರುವುದಷ್ಟೇ ಅಲ್ಲ, ಹಲವಾರು ಸಂದರ್ಭಗಳಲ್ಲಿ ಅಲ್ಲಿನ ರಾಜಕಾರಣಿಗಳು ಇಂಥ ಶಕ್ತಿಗಳ ಬಗ್ಗೆ ಬಹಿರಂಗವಾಗಿಯೇ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಖೇದಕರ ಹಾಗೂ ತೀವ್ರ ಆಕ್ಷೇಪಾರ್ಹವಾದಂಥ ವಿಚಾರ’ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಇನ್ನು, ‘ಕೆನಡಾ ರಾಷ್ಟ್ರವು ಅನೇಕ ಅಪರಾಧಗಳ ತವರೂರಾಗಿದೆ. ಅಲ್ಲಿ, ಕೊಲೆಗಳು, ಮಾನವ ಕಳ್ಳಸಾಗಣೆ ಸೇರಿದಂತೆ ಅನೇಕ ಸಂಘಟಿತ ಅಪರಾಧಗಳು ನಡೆಯುತ್ತಲೇ ಇರುತ್ತವೆ. ಅಂಥ ಎಲ್ಲಾ ಕುಕೃತ್ಯಗಳಿಗೆ ಭಾರತದ ನಂಟು ಕಲ್ಪಿಸುವುದು ಸರಿಯಲ್ಲ. ಇಂಥ ಯಾವುದೇ ಪ್ರಯತ್ನಗಳನ್ನು ಕೆನಡಾದ ಪ್ರಯತ್ನವನ್ನು ಭಾರತ ಖಡಾಖಂಡಿತವಾಗಿ ನಿರಾಕರಿಸುತ್ತದೆ’ ಎಂದು ವಿದೇಶಾಂಗ ಇಲಾಖೆಯು ಕಟುಶಬ್ದಗಳಲ್ಲಿ ಹೇಳಿದೆ.