ಹಾಸನ: ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಆಧುನಿಕ ಭಸ್ಮಾಸುರರು ಎಂದು ಹೇಳುವ ಮೂಲಕ ಕಂದಾಯ ಸಚಿವರು ಕೃಷ್ಣ ಭೈರೇಗೌಡ ಅವರು ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಹಾಸನ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಜರಗಿದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವರು ಕೃಷ್ಣ ಭೈರೇಗೌಡ ಅವರು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಆಧುನಿಕ ಭಸ್ಮಾಸುರರು ಎಂದು ಹೇಳುವ ಮೂಲಕ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಹಣದಿಂದ ಸಂಬಳ ಪಡೆದು ಸಕಾಲದಲ್ಲಿ ಜನ ಸಾಮಾನ್ಯರ ಕೆಲಸ ಮಾಡಿಕೊಡದೆ ಅವರ ತಲೆ ಮೇಲೆಯೇ ಕೈ ಇಡುವಂತ ಚಾಳಿಯ ಮೂಲಕ 21ನೇ ಶತಮಾನದ ಭಸ್ಮಾಸುರರಾಗಿದ್ದಾರೆ ಎಂದು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಕಂದಾಯ ಇಲಾಖೆಯ ಬಾಕಿ ಕಡತಗಳ ವಿವರ ಪಡೆದು.
ಎಲ್ಲ ಇಲಾಖೆಗಳ ಮಾತೃ ಇಲಾಖೆ ಕಂದಾಯ ಇಲಾಖೆಯಾಗಿದೆ. ಇದು ಜನರ ಮೇಲೆ ನೇರ ಪರಿಣಾಮ ಬೀರುವ ಇಲಾಖೆಯಾಗಿದ್ದು, ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಮೇಲೆ ಹೆಚ್ಚು ಜವಾಬ್ದಾರಿಯಿದೆ. ಸಣ್ಣಪುಟ್ಟ ಸಮಸ್ಯೆಗಳಿಗೆ ಜನಸಾಮಾನ್ರಯನ್ನು ಕಚೇರಿಗೆ ಅಲೆದಾಡಿಸುವುದರಿಂದ ಸರಕಾರಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದರು.
ಶಾಸಕರ ಅಧ್ಯಕ್ಷತೆಯಲ್ಲಿ ಬಗರ್‌ಹುಕುಂ ಸಕ್ರಮ ಸಮಿತಿಗಳು ರಚನೆಯಾಗಿವೆ. ನ್ಯಾಯಾಲಯದ ನಿರ್ದೇಶನದಂತೆ 6 ತಿಂಗಳುಗಳಲ್ಲಿ ಅರ್ಜಿಗಳ ವಿಲೇವಾರಿಯಾಗಬೇಕು. ಆದರೆ ಲೋಕಸಭಾ ಚುನಾವಣೆ ಬರುತ್ತಿರುವುದರಿಂದ ಶೀಘ್ರ ಅರ್ಜಿಗಳ ವಿಲೇವಾರಿ ಆಗಲೇಬೇಕು. ಶಾಸಕರನ್ನು ಕಾಡಿ ಬೇಡಿಯಾದರೂ ತಹಶೀಲ್ದಾರರು ತಿಂಗಳಲ್ಲಿ 2 ಸಭೆಗಳನ್ನು ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು.