ಫಿಫಾ ವಿಶ್ವಕಪ್ 2022ರ ಟೂರ್ನಿಯಲ್ಲಿ ಪೋರ್ಚುಗಲ್ ತಂಡ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೋನಾಲ್ಡೋ ನಾಯಕತ್ವದ ಪೋರ್ಚುಗಲ್ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ನಾಯಕ ರೋನಾಲ್ಡೋಗೆ ಹಿನ್ನಡೆಯಾಗಿದೆ.
ಹಳೆ ಪ್ರಕರಣದಲ್ಲಿ ರೋನಾಲ್ಡೋ ನಿಯಮ ಮೀರಿ ವರ್ತಿಸಿರುವುದು ಸಾಬೀತಾಗಿದೆ. ಹೀಗಾಗಿ ಎರಡು ಪಂದ್ಯ ಆಡದಂತೆ ನಿಷೇಧಿಸಲಾಗಿದೆ. ಇಷ್ಟೇ ಅಲ್ಲ 50 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಆದರೆ ಎರಡು ಪಂದ್ಯದ ನಿಷೇಧ ಫಿಫಾ ವಿಶ್ವಕಪ್ ಟೂರ್ನಿಗೆ ಅನ್ವಯವಾಗುವುದಿಲ್ಲ. ಕ್ಲಬ್ ಫುಟ್ಬಾಲ್ ತಂಡಕ್ಕೆ ಅನ್ವಯವಾಗಲಿದೆ.
2022ರ ಎಪ್ರಿಲ್ ತಿಂಗಳಳಲ್ಲಿ ಕ್ರಿಸ್ಟಿಯಾನೋ ರೋನಾಲ್ಡೋ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಿದ್ದರು. ಲೀಗ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಎವರ್ಟನ್ ಎಫ್‍ಸಿ ವಿರುದ್ದ ಮುಗ್ಗರಿಸಿತ್ತು. 0- 1ಅಂತರದಲ್ಲಿ ಸೋಲು ಕಂಡಿತ್ತು. ಇದು ಕ್ರಿಸ್ಟಿಯಾನೋ ರೋನಾಲ್ಡೋ ಅಸಮಾಧಾನಕ್ಕೆ ಕಾರಣವಾಗಿತ್ತು. ಮೈದಾನದಿಂದ ಹೊರಹೋಗುತ್ತಿರುವ ವೇಳೆ ಫೋಟೋ ಕ್ಲಿಕ್ಕಿಸಲು ಬಂದ ಅಭಿಮಾನಿಯ ಮೇಲೂ ಸಿಟ್ಟಾದ ರೋನಾಲ್ಡೋ, ಅಭಿಮಾನಿಯ ಫೋನ್ ಕಿತ್ತು ನೆಲಕ್ಕೆ ಎಸೆದಿದ್ದರು.
ಈ ಘಟನೆಯನ್ನು ಲೀಗ್ ಫುಟ್ಬಾಲ್ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿತ್ತು. ಈ ಕುರಿತು ವಿಚಾರಣೆ ನಡೆಸಿದೆ. ವಿಚಾರಣೆಯಲ್ಲಿ ಕ್ರಿಸ್ಟಿಯಾನೋ ರೋನಾಲ್ಡೋ ಫುಟ್ಬಾಲ್ ಇ3 ನಿಯಮ ಮೀರಿರುವುದು ಖಚಿತವಾಗಿದೆ. ಹೀಗಾಗಿ ಇದೀಗ ಶಿಕ್ಷೆ ಪ್ರಕಟಗೊಂಡಿದೆ. 50 ಲಕ್ಷ ರೂಪಾಯಿ ದಂಡ ಹಾಗೂ 2 ಪಂದ್ಯದ ನಿಷೇಧ ಶಿಕ್ಷೆ ನೀಡಲಾಗಿದೆ. ಸದ್ಯ ಕ್ರಿಸ್ಟಿಯಾನೋ ರೋನಾಲ್ಡೋ ಮ್ಯಾಂಚೆಸ್ಟರ್ ತಂಡ ತೊರೆದಿದ್ದಾರೆ. ಶೀಘ್ರದಲ್ಲೇ ಹೊಸ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ರೋನಾಲ್ಡೋ ಯಾವ ತಂಡ ಸೇರಿಕೊಳ್ಳುತ್ತಾರೋ, ಕ್ಲಬ್ ಪರ ಆರಂಭಿಕ ಎರಡು ಪಂದ್ಯ ಆಡುವಂತಿಲ್ಲ.