ಅನುಭವಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಬಾರಿಸಿದ ಆಕರ್ಷಕ ಅರ್ಧಶತಕ(58) ಹಾಗೂ ಕುಲ್ದೀಪ್ ಯಾದವ್ ಬಾರಿಸಿದ ಸಮಯೋಚಿತ 40 ರನ್ಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 404 ರನ್ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿಯೇ ಸವಾಲಿನ ಮೊತ್ತ ಕಲೆಹಾಕಿದೆ.
ಮೊದಲ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 278 ರನ್ ಬಾರಿಸಿದ್ದ ಟೀಂ ಇಂಡಿಯಾ, ಎರಡನೇ ದಿನದಾಟದ ಆರಂಭದಲ್ಲೇ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡಿತು. ಮೊದಲ ದಿನದಾಟದಂತ್ಯದ ವೇಳೆಗೆ 82 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್, ತನ್ನ ಖಾತೆಗೆ ಕೇವಲ 4 ರನ್ ಸೇರಿಸಿ ಎಬೊದತ್ ಹೊಸೈನ್ಗೆ ವಿಕೆಟ್ ಒಪ್ಪಿಸಿದರು.
ಹೌದು, ಎರಡನೇ ದಿನದಾಟದ ಆರಂಭದಲ್ಲೇ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡು ಕೊಂಚ ಆತಂಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ 8ನೇ ವಿಕೆಟ್ಗೆ ಅನುಭವಿ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಆಸರೆಯಾದರು. 8ನೇ ವಿಕೆಟ್ಗೆ ಈ ಜೋಡಿ 200 ಎಸೆತಗಳನ್ನು ಎದುರಿಸಿ 87 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ರವಿಚಂದ್ರನ್ ಅಶ್ವಿನ್ 113 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 58 ರನ್ ಬಾರಿಸಿ ಮೆಹದಿ ಹಸನ್ಗೆ ವಿಕೆಟ್ ಒಪ್ಪಿಸಿದರು. ಇನ್ನೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಕುಲ್ದೀಪ್ ಯಾದವ್ 114 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 40 ರನ್ ಬಾರಿಸಿ ತೈಜುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು.
ಅಶ್ವಿನ್ ವಿಕೆಟ್ ಪತನವಾಗುತ್ತಿದ್ದಂತೆಯೇ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿತು. ಟೀಂ ಇಂಡಿಯಾ ಕೇವಲ 19 ರನ್ಗಳ ಅಂತರದಲ್ಲಿ ಕೊನೆಯ 4 ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ಉಮೇಶ್ ಯಾದವ್ 2 ಸಿಕ್ಸರ್ ಸಹಿತ ಅಜೇಯ 15 ರನ್ ಬಾರಿಸಿದರೆ, ಮೊಹಮ್ಮದ್ ಸಿರಾಜ್ 4 ರನ್ ಗಳಿಸಿ ಮೆಹದಿ ಹಸನ್ಗೆ ವಿಕೆಟ್ ಒಪ್ಪಿಸಿದರು. ಬಾಂಗ್ಲಾದೇಶ ತಂಡದ ಪರ ಸ್ಪಿನ್ನರ್ಗಳಾದ ಮೆಹದಿ ಹಸನ್ ಹಾಗೂ ತೈಜುಲ್ ಅಹಮದ್ ತಲಾ 4 ವಿಕೆಟ್ ಪಡೆದರೆ, ಎಬೊದತ್ ಹೊಸೈನ್ ಹಾಗೂ ಖಾಲಿದ್ ಅಹಮದ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.