ಕೆನಡಾ: ಭಾರತ (India) ಹಾಗೂ ಕೆನಡಾ (Canada) ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮೂಡಿರುವ ಹಿನ್ನೆಲೆ ಕೆನಡಾದ ಪ್ರಜೆಗಳಿಗೆ ಭಾರತೀಯ ವೀಸಾ (Visa) ಸೇವೆಯನ್ನು ಗುರುವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜೂನ್‌ನಲ್ಲಿ ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಆರೋಪಿಸಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮೂಡಿದ್ದು, ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ವೀಸಾ ಸಲಹೆಗಳನ್ನು ಒದಗಿಸುವ ಭಾರತದ ಆನ್‌ಲೈನ್ ವೀಸಾ ಅರ್ಜಿ ಕೇಂದ್ರ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ತನ್ನ ವೆಬ್‌ಸೈಟ್‌ನಲ್ಲಿ ಸೂಚನೆಯನ್ನು ಪೋಸ್ಟ್ ಮಾಡಿದೆ. ಭಾರತೀಯ ಮಿಷನ್‌ನಿಂದ ಪ್ರಮುಖ ಸೂಚನೆ: ಕಾರ್ಯಾಚರಣೆಯ ಕಾರಣಗಳಿಂದಾಗಿ 2023ರ ಸೆಪ್ಟೆಂಬರ್ 21ರಿಂದ ಜಾರಿಗೆ ಬರುವಂತೆ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆಯ ತನಕ ಸ್ಥಗಿತಗೊಳಿಸಲಾಗಿದೆ ಎಂದು ಬರೆದಿದೆ. ಕೆನಡಾದ ಪ್ರಧಾನಿ ಟ್ರುಡೋ ಸೋಮವಾರ ಸಂಸತ್ತಿನಲ್ಲಿ ಮಾತನಾಡುತ್ತಾ, ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್‌ನ ಮಾರಣಾಂತಿಕ ಗುಂಡಿನ ದಾಳಿಯ ಹಿಂದೆ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನು ಭಾರತ ತಳ್ಳಿ ಹಾಕಿದೆ. ನಾವು ತಮ್ಮ ಸಂಸತ್ತಿನಲ್ಲಿ ಕೆನಡಾ ಪ್ರಧಾನಿಯವರ ಹೇಳಿಕೆಯನ್ನು ಗಮನಿಸಿದ್ದೇವೆ ಹಾಗೂ ಅದನ್ನು ತಿರಸ್ಕರಿಸುತ್ತೇವೆ. ಮತ್ತು ಅವರ ವಿದೇಶಾಂಗ ಸಚಿವರ ಹೇಳಿಕೆನ್ನೂ ತಿರಸ್ಕರಿಸುತ್ತೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.