Tag: ಭಾರತ ಎದುರು ಅಜೇಯ ಶತಕ ಸಿಡಿಸಿ ಸಂಭ್ರಮಿಸಿದ ಟಾಮ್ ಲೇಥಮ್

ಭಾರತ ಎದುರು ಅಜೇಯ ಶತಕ ಸಿಡಿಸಿ ಸಂಭ್ರಮಿಸಿದ ಟಾಮ್ ಲೇಥಮ್

ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟರ್‌ ಟಾಮ್ ಲೇಥಮ್, ಭಾರತ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 145 ರನ್ ಸಿಡಿಸುವ ಮೂಲಕ ಎರಡು ದಶಕಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಈಡನ್ ಪಾರ್ಕ್‌ ಮೈದಾನದಲ್ಲಿ ಟಾಮ್ ಲೇಥಮ್ 121 ರನ್ ಬಾರಿಸುತ್ತಿದ್ದಂತೆಯೇ ಹೊಸತೊಂದು ಮೈಲ್ಲಿಗಲ್ಲು ನೆಟ್ಟಿದ್ದಾರೆ. ಹೌದು, ಟಾಮ್ ಲೇಥಮ್‌, ಇದೀಗ ಭಾರತ ವಿರುದ್ದ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಮಾಡಿದ ನ್ಯೂಜಿಲೆಂಡ್‌ನ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1999ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ನೇಥಮ್ ಆಶ್ಲೆ ಭಾರತ ವಿರುದ್ದ 136 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 120 ರನ್ ಬಾರಿಸಿದ್ದರು. 23 ವರ್ಷಗಳಿಂದಲೂ ಈ ದಾಖಲೆ ನೇಥನ್ ಆಶ್ಲೆ ಹೆಸರಿನಲ್ಲಿಯೇ ಇತ್ತು. ಇದೀಗ ಆ ದಾಖಲೆಯನ್ನು ಟಾಮ್ ಲೇಥಮ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಇದೇ ವೇಳೆ ಟಾಮ್ ಲೇಥಮ್, ಭಾರತ ವಿರುದ್ದ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತಿವೇಗದ ಶತಕ ಸಿಡಿಸಿದ ನ್ಯೂಜಿಲೆಂಡ್ ಬ್ಯಾಟರ್ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ. ಟಾಮ್ ಲೇಥಮ್ ಇಂದು 76 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದರು. ಆದರೆ 1999ರಲ್ಲಿ ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಕ್ರಿಸ್ ಕ್ರೇನ್ಸ್‌ 75 ಎಸೆತಗಳನ್ನು ಎದುರಿ ಮೂರಂಕಿ ಮೊತ್ತ ದಾಖಲಿಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 307 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು 88 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಲ್ಕನೇ ವಿಕೆಟ್‌ಗೆ ಮುರಿಯದ 221 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ಕಿವೀಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ನಾಯಕ ಶಿಖರ್ ಧವನ್, ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಬಾರಿಸಿತ್ತು.