ಹೊಟ್ಟೆ ನೋವಿನಿಂದ ಬಳಲಿ ಬಳಲಿ 2021ರ ನವೆಂಬರ್ 8 ರಂದು ಮೃತಪಟ್ಟ 18 ವರ್ಷದ ಬಾಲೆಯ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ. ಯುವತಿಯ ಮೊಬೈಲ್ನಲ್ಲಿ ರಹಸ್ಯ ಬಯಲಾಗಿದ್ದು, ತುಮಕೂರಿನ ಮಾಜಿ ಕಾರ್ಪೋರೇಟರ್ ಹಾಗೂ ಚರ್ಚ್ ಕಮಿಟಿ ಸದಸ್ಯರಾಗಿದ್ದಂತಹ ರಾಜೇಂದ್ರ ಕುಮಾರ್ ನ ಕಾಮದಾಟದ, ಹೇಯ ಕೃತ್ಯ ಕುರಿತು ಮೃತಳ ತಾಯಿ ಪೊಲೀಸರ ಮುಂದೆ ಎಳೆ – ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಗ್ರೆಸ್ ಪ್ರೀರ್ತನಾ ಈ ಕೃತ್ಯಕ್ಕೆ ಬಲಿಯಾದ ಮೃತ ಯುವತಿ. ಈಕೆಯ ತಾಯಿ ಸಂತೋಷ್ ಸ್ಟೆಲ್ಲಾ ತುಮಕೂರಿನ ನಗರ ಪೊಲೀಸ್ ಠಾಣೆಯಲ್ಲಿ ರಾಜೇಂದ್ರಕುಮಾರ್ ವಿರುದ್ಧ ದೂರು ನೀಡಿದ್ದಾರೆ. ತುಮಕೂರಿನ ಸಿ.ಎಸ್.ಐ. ವೆಸ್ಲಿ ಚರ್ಚ್ನನಲ್ಲಿ ಸಭಾಪಾಲನ ಸದಸ್ಯನಾಗಿದ್ದ ರಾಜೇಂದ್ರಕುಮಾರ್, 2013ರಿಂದ 2018ರ ಅವಧಿಯಲ್ಲಿ ತುಮಕೂರು ನಗರ ಪಾಲಿಕೆಯ ನಾಮಿನಿ ಸದಸ್ಯನಾಗಿದ್ದ. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ತುಮಕೂರಿನ ಡಿಸಿ ಕಚೇರಿ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್ ಸ್ಟೆಲ್ಲಾಗೆ 5 ವರ್ಷದ ಹಿಂದೆ ರಾಜೇಂದ್ರಕುಮಾರ್ ಆಕಸ್ಮಿಕ ಪರಿಚಯವಾಗಿತ್ತು. ತನ್ನನ್ನು ಚರ್ಚ್ ಕಮಿಟಿ ಸದಸ್ಯನೆಂದು ಪರಿಚಯಿಸಿಕೊಂಡಿದ್ದ ರಾಜೇಂದ್ರ, ಕರೊನಾ ಲಾಕ್ಡೌನ್ ವೇಳೆ ಆಹಾರ ಸಾಮಗ್ರಿ ಕಿಟ್ ನೀಡುವ ನೆಪದಲ್ಲಿ ಸ್ಟೆಲ್ಲಾರ ಮನೆಗೆ ಭೇಟಿ ನೀಡಿದ್ದ. ಆ ಮನೆಯಲ್ಲಿ ತಾಯಿ-ಮಗಳು ಇಬ್ಬರೇ ಇರುವುದನ್ನೇ ಬಂಡವಾಳ ಮಾಡಿಕೊಂಡ ರಾಜೇಂದ್ರ, ಸಹಾಯ ಮಾಡುವ ನೆಪದಲ್ಲಿ ಸಲುಗೆ ಬೆಳೆಸಿಕೊಂಡಿದ್ದ. ತಾಯಿಗೆ ಗೊತ್ತಾಗದಂತೆ ಮಗಳನ್ನು ಪುಸಲಾಯಿಸಿ ಹರೆಯದ ಇಲ್ಲಸೋಲ್ಲದ ಆಸೆ – ಆಕಾಂಕ್ಷೆಗಳನ್ನು ತುಂಬಿ ಆಕೆಯನ್ನು ಹಲವು ಬಾರಿ ಲೈಂಗಿಕ ಸಂಪರ್ಕ ಬಳಸಿಕೊಂಡಿದ್ದು. ಪದೇ ಪದೆ ಗರ್ಭಪಾತದ ಮಾತ್ರೆಯನ್ನೂ ಕೊಡುತ್ತಿದ್ದ.
2021ರ ಅಕ್ಟೋಬರ್ ನಲ್ಲಿ ಯುವತಿ ಗ್ರೇಸ್ ಪ್ರೀರ್ತನಾಗೆ ಅಸಹಜ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತುಮಕೂರಿನ ಎರಡ್ಮೂರು ಆಸ್ಪತ್ರೆಗೆ ಆಕೆಯನ್ನ ರಾಜೇಂದ್ರಕುಮಾರ್ನೇ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದ. ಸ್ಟೆಲ್ಲಾ ಕೂಡ ಜತೆಗೆ ಹೋದರೂ ಆಕೆಯನ್ನು ಆಸ್ಪತ್ರೆಯ ಹೊರಗೇ ಇರುವಂತೆ ರಾಜೇಂದ್ರ ಸೂಚಿಸುತ್ತಿದ್ದ. ಮಗಳಿಗೆ ಏನಾಗಿದೆ ಎಂದು ಸ್ಟೆಲ್ಲಾಗೆ ಅರಿವೇ ಇರಲಿಲ್ಲ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಯುವತಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಮಗಳ ಬಳಿ ಏನಾಯ್ತವ್ವ? ನಿಜ ಹೇಳು ಎಂದು ತಾಯಿ ಮೊರೆ ಇಟ್ಟು ಕೇಳಿದ್ದಳು.
ಆಗ ಅಸಲಿ ಸತ್ಯ ಬಾಯ್ಬಿಟ್ಟ ಮಗಳು, ಇಷ್ಟಕ್ಕೆಲ್ಲ ಕಾರಣ ರಾಜೇಂದ್ರಕುಮಾರ್. ನನ್ನನ್ನು ಅವರ ಆಫೀಸ್ಗೆ ಕರೆದೊಯ್ದು ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡರು. ಎರಡ್ಮೂರು ಬಾರಿ ಅಬಾರ್ಷನ್ ಮಾಡಿಸಿದರು. ಗರ್ಭಪಾತ ಆಗಲೆಂದು ಪದೇ ಪದೆ ಮಾತ್ರೆ ನುಂಗಿಸಿದ್ದರು. ಎಂದು ಕಣ್ಣೀರಿಟ್ಟಿದ್ದಳು 2021ರ ನವೆಂಬರ್ 8ರಂದು ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಳು. ಈಕೆಯ ಶವವನ್ನು ತುಮಕೂರಿಗೆ ತೆಗೆದುಕೊಂಡು ಹೋಗಲು ತಾಯಿಗೆ ಅವಕಾಶ ಕೊಡದ ರಾಜೇಂದ್ರಪ್ರಸಾದ್, ಬೆಂಗಳೂರಿನ ಶಾಂತಿನಗರದ ಬಳಿ ಇರುವ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ.
ಎಲ್ಲ ಮುಗಿದು ವಾಪಸ್ ಮನೆಗೆ ಬಂದ ವಾರದ ಬಳಿಕ ಮಗಳ ಮೊಬೈಲ್ ಪರಿಶೀಲಿಸಿದ ತಾಯಿಗೆ ಹಲವು ರಹಸ್ಯ ಗೊತ್ತಾಗಿದೆ. ಮಗಳ ಜತೆ ರಾಜೇಂದ್ರಕುಮಾರ್ ಮಾತನಾಡಿದ್ದ ಆಡಿಯೋ ರೆಕಾರ್ಡ್, ಫೋಟೋ, ವಿಡಿಯೋ ಪತ್ತೆಯಾಗಿದೆ. ಇದನ್ನು ಸಾಕ್ಷಿಯಾಗಿಟ್ಟುಕೊಂಡು ಮಗಳ ಸಾವಿನ ಬಗ್ಗೆ ಪ್ರಶ್ನಿಸಿದ ತಾಯಿಗೆ ರಾಜೇಂದ್ರಕುಮಾರ್ ಜೀವ ಬೆದರಿಕೆ ಹಾಕಿದ್ದ ಎಂದು ದೂರು ದಾಖಲಾಗಿದೆ. ಮಗಳ ಸಾವು ಕೊಲೆ ಎಂದು ಶಂಕಿಸಿ ತುಮಕೂರು ನಗರ ಪೊಲೀಸರಿಗೆ ಮಾರ್ಚ್ 8ರಂದು ತಾಯಿ ಸಂತೋಷ್ ಸ್ಟೆಲ್ಲಾ ದೂರು ನೀಡಿದ್ದಾಳೆ. ಈ ವಿಚಾರವಾಗಿ ರಾಜೇಂದ್ರಕುಮಾರ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.