ಉತ್ತರ ಕನ್ನಡ : ಮಾರ್ಚ್ 16 ರಿಂದ ಶುರುವಾದ ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಯಾದ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಯ ರಥೋತ್ಸವದ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳ ಮೆರವಣಿಗೆಯೇ ನಡೆಯುತ್ತದೆ.
ಈ ವರ್ಷದ ಬುಧವಾರದ (ಮಾರ್ಚ್ 16) ಮುಂಜಾನೆಯ ಮಾರಿಕಾಂಬಾ ರಥಾಗಮನ ಸಂದರ್ಭದಲ್ಲಿ ಹಿಂದಿನಂತೆ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಆಕರ್ಷಣೆಗಳಿದ್ದವು, ಜೊತೆಗೆ ಈ ಬಾರಿ ಎಲ್ಲಾ ಜಾತಿ ಮತ್ತು ಧರ್ಮದ ನೂರಾರು ಉತ್ತರ ಕನ್ನಡದ ಜಾಗೃತ ನಾರಾಯಣಗುರುಗಳ ಅನುಯಾಯಿಗಳು ಸಮಾನತೆ ಮತ್ತು ಸೌಹಾರ್ದತೆಯ ಪ್ರತೀಕವಾದ ನಾರಾಯಣ ಗುರುಗಳ ಹಳದಿ ಬಾವುಟ ಮತ್ತು ಹಳದಿ ಶಾಲ್ ನೊಂದಿಗೆ ನಾಡಿನ ಬುಡಕಟ್ಟು ಕಲೆ ಡೊಳ್ಳು ಕುಣಿತದೊಂದಿಗೆ ಮಾರಿಕಾಂಬಾ ದೇವಿಯ ರಥೋತ್ಸವದಲ್ಲಿ ಹೆಜ್ಜೆಹಾಕಿದ್ದು ಎಲ್ಲರ ಮನ ಸೆಳೆಯಿತು.
ಹಳದಿ ಶಾಲಿನೊಂದಿಗೆ ಡೊಳ್ಳುಹೊಡೆದು ಹಳದಿ ಬಾವುಟ ಹಾರಿಸಿದ್ದು ಜನಾಕರ್ಷಣೆ ಎನಿಸಿತು. ಸಂಪ್ರದಾಯ, ಚಾರಿತ್ರಿಕ ಆಚರಣೆಗಳ ವೈಶಿಷ್ಟ್ಯದ ಜೊತೆಗೆ ಮಾರಿಜಾತ್ರೆಯ ತೇರಿನಲ್ಲಿ ಕಾಣಿಸಿಕೊಂಡ ಅಪ್ಪು ಅಭಿಮಾನಿಗಳು, ನಾರಾಯಣಗುರು ಅನುಯಾಯಿಗಳು ಈ ವರ್ಷದ ಜಾತ್ರಾ ಮೆರವಣಿಗೆ ಸೊಗಸು ಹೆಚ್ಚಿಸಿದರು.
ಜೊತೆಗೆ ರಾಜ್ಯದಾದ್ಯಂತ ನಾರಾಯಣ ಗುರುಗಳ ನೆನಪು, ಸ್ಮರಣೆ ಚಿಂತನೆಗಳ ಪ್ರಸಾರದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳ ಪ್ರಮುಖರಾದ ಲೋಹಿತ್ ನಾಯ್ಕ್, ಪ್ರಸನ್ನ ನಾಯ್ಕ್, ಜಗದೀಶ್ ನಾಯ್ಕ, ಪ್ರಭು ಸಾಲರ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಘು ಬೆಳಲೆ, ಹರೀಶ್ ನಾಯ್ಕ, ಪ್ರದೀಪ್ ನಾಯ್ಕ, ವಕೀಲರಾದ ಮಂಜುನಾಥ್ N, ಯುವರಾಜ್ ಕನ್ನಡಪರ ಹೋರಾಟಗಾರರದ ಮಹೇಶ್, ನಾಗರಾಜ್ ಶೆಟ್ಟಿ, ನಾಮದಾರಿ ಮುಖಂಡರಾದ ಶೇಖರ್ ಪೂಜಾರಿ ಮುಂತಾದವರು ಪಾಲ್ಗೊಂಡರು.