Spread the love

ಬೆಂಗಳೂರು. ಮಾ, 22 : ವಿಜಯಪುರ ಜಿಲ್ಲೆಯಲ್ಲಿರುವ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಸಾಮಾನ್ಯ ವಿಶ್ವವಿದ್ಯಾಲಯವನ್ನು ಪುನಾರಚಿಸಿ, ವಿಜಯಪುರ ಜಿಲ್ಲೆಯ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಗೆ ಸೀಮಿತಗೊಳಿಸಲು ಸರ್ಕಾರ ಉದ್ದೇಶಿಸಿದ್ದು ಖಂಡನೀಯ ಎಂದು ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯಾಧ್ಯಕ್ಷ ಹಾಗೂ ನ್ಯಾಯವಾದಿಗಳಾದ ಶ್ರೀನಾಥ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಗರದ ಪ್ರೆಸ್ ಕ್ಲಬ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀನಾಥ್ ಪೂಜಾರಿ, ಈ ಹಿಂದೆ ಜನವರಿ 7 ರಂದು ಮಾಧ್ಯಮಗಳೊಂದಿಗೆ ಮಾತನಾಡಿದಾಗ ನಮ್ಮ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ. ಎನ್. ಅಶ್ವತ್ಥನಾರಾಯಣರವರು ಹಾಗೂ ವಿಜಯಪುರ ಭಾಗದ ಸಚಿವರಾದ ಗೋವಿಂದ ಕಾರಜೋಳ ಅವರು, “ಇದೊಂದು ಸುಳ್ಳು ಸುದ್ದಿ ಅದೆಲ್ಲ ಊಹಾ ಪೊಹಾ, ನಾವು ಮಹಿಳಾ ಶಿಕ್ಷಣ ಉನ್ನತಿಕರಿಸುತ್ತೆವೆ” ಎಂದಿದ್ದರು. ಈ ವಿಶ್ವವಿದ್ಯಾಲಯವನ್ನು ಮಹಿಳಾ ವಿಶ್ವವಿದ್ಯಾಲಯವನ್ನಾಗಿ ಮುಂದುವರಿಸುತ್ತೆವೆ ಎಂದು ನಾಡಿನ ಜನತೆಯ ಮುಂದೆ ಹೇಳಿಕೆ ನೀಡಿದ್ದರು.

ಅದರಂತೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಈ ರೀತಿಯ ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ ಸೃಷ್ಟಿಸುವದನ್ನು ಯಾರು ಮಾಡಬಾರದು ಇದಕ್ಕೆ ಪಾಲಕರು ಹಾಗೂ ಸಾರ್ವಜನಿಕರು ನಂಬಬಾರದು ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ ಸದನದಲ್ಲಿ ಉನ್ನತ ಶಿಕ್ಷಣ ಸಚಿವರೇ ಉತ್ತರ ಕೊಟ್ಟಿದ್ದಾರೆ ಈಗ ಇವರನ್ನು ಜನರು ನಂಬುವುದು ಕಷ್ಟವಾಗುತ್ತದೆ, ನಿಜಕ್ಕೂ ಸರ್ಕಾರದ ಈ ಧೋರಣೆ ಮಹಿಳಾ ವಿರೋಧಿ ನಡೆಯಾಗಿದೆ ಎಂದು ಶ್ರೀನಾಥ್ ಪೂಜಾರಿ ಖಂಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ಶಾಸಕರಾದ ಯಶವಂತರಾಯಗೌಡ ವಿ. ಪಾಟೀಲರು ಸದನದಲ್ಲಿ ವಿಶ್ವವಿದ್ಯಾಲಯ ಸಂಬಂಧ ಕೇಳಿದ ಪ್ರಶ್ನೆಗೆ ವಿಧಾನ ಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರು, ವಿಶ್ವವಿದ್ಯಾಲಯವನ್ನು ಮುಚ್ಚುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ. ಆದರೆ, ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಸಾಮಾನ್ಯ ವಿಶ್ವವಿದ್ಯಾಲಯವನ್ನಾಗಿ ಪುನಾರಚಿಸು ಹಾಗೂ ವಿಜಯಪುರ ಜಿಲ್ಲೆಯ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯೊಂದಿಗೆ ಸಂಯೋಜನೆಗೊಳಿಸಿ, ಸಾಮಾನ್ಯ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ ಎಂದು ಉತ್ತರ ನೀಡಿದ್ದಾರೆ. ಮೊದಲು ನಮ್ಮ ಹೇಳಿಕೆ ಸುಳ್ಳು ಹಾಗೂ ಊಹಾ ಪೂಹಾ ಎಂದವರು ಇಂದು ಸದನದಲ್ಲಿ ಸತ್ಯವೆಂದು ಒಪ್ಪಿಕೊಂಡಿದ್ದಾರೆ, ಸರ್ಕಾರ ಕೂಡಲೇ ತಮ್ಮ ನಿರ್ಧಾರವನ್ನು ಬದಲಿಸಿ ಮಹಿಳಾ ವಿಶ್ವವಿದ್ಯಾಲಯವನ್ನು ಸಾಮಾನ್ಯ ವಿವಿ‌ಯಾಗಿ ರೂಪಿಸುವ ಆಲೋಚನೆಯನ್ನು ಕೈ ಬಿಡಬೇಕು ಇಲ್ಲವಾದರೆ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಾಡಿನ ಸಮಸ್ತ ಮಹಿಳೆಯರ ಶಿಕ್ಷಣದ ಹಕ್ಕು ಉಳಿಸಿಕೊಳ್ಳಲು ಹೋರಾಟ ಮಾಡಲಾಗುವುದು ಎಂದು ಈ ವೇಳೆ ಶ್ರೀನಾಥ್ ಪೂಜಾರಿ ತಿಳಿಸಿದ್ದರು.

ಇದೇ ವೇಳೆ ಮಾತನಾಡಿದ ಭೀಮ್ ಆರ್ಮಿ ದಕ್ಷಿಣ ಕರ್ನಾಟಕದ ಅಧ್ಯಕ್ಷ ರಾಜಗೋಪಾಲ್, ಮಹಿಳಾ ವಿವಿ ಸಾಮಾನ್ಯ ವಿವಿಯಾಗಿ ರೂಪಿಸುವ ಸರ್ಕಾರ ನಡೆ ಮಹಿಳಾ ವಿರೋಧಿ ನಡೆಯಾಗಿದೆ. ಕೊಡಲೇ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ, ವಿಶ್ವ ವಿದ್ಯಾಲಯವನ್ನು ಹೆಚ್ಚಿನ ಅನುದಾನ ನೀಡುವ ಮೂಲಕ ಮಹಿಳೆಯರ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು. ಒಂದು ವೇಳೆ ಸರ್ಕಾರ ಮಹಿಳಾ ವಿಶ್ವವಿದ್ಯಾಲಯವನ್ನು ಸಾಮಾನ್ಯ ವಿವಿ‌ಯಾಗಿ ರೂಪಿಸಲು ಕೈಹಾಕಿದ್ದರೆ ಭೀಮ್ ಆರ್ಮಿ ಸಂಘಟನೆ ಇದರ ವಿರುದ್ಧ ವಿಧ್ಯಾರ್ಥಿ ಸಂಘಟನೆಗಳ ಜೊತೆಗೂಡಿ ಹೋರಾಡಲಿದೆ ಎಂದರು.

ಈ ಗೋಷ್ಠಿಯಲ್ಲಿ ಪರಿಷತ್ ನ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ ಹಾಗೂ ವಿಧ್ಯಾರ್ಥಿ ಮುಖಂಡ ಮನೋಜ್ ಉಪಸ್ಥಿತರಿದ್ದರು.


Spread the love