Spread the love

ಕರ್ನಾಟಕದಲ್ಲಿನ ಪ್ರತಿಯೊಬ್ಬ ಕನ್ನಡಿಗನೂ ವೀಕ್ಷಿಸಲು ತುದಿಗಾಲಲ್ಲಿ ನಿಂತಿರುವ ಕರುನಾಡಿನ ಜನತೆಯ ಮನಗೆದ್ದ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಪ್ರದರ್ಶನವನ್ನು ಬಲವಂತದಿಂದ ನಿಲ್ಲಿಸಿ “ಕಾಶ್ಮೀರಿ ಫೈಲ್ಸ್” ಚಿತ್ರ ಪ್ರದರ್ಶಿಸಲು ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಚಿತ್ರಮಂದಿರಗಳ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಜೇಮ್ಸ್ ಚಿತ್ರದ ನಿರ್ಮಾಪಕರು ನನ್ನನ್ನು ಭೇಟಿಯಾಗಿ ತಿಳಿಸಿದ ವಿಷಯ ಆಘಾತಕಾರಿಯಾಗಿದೆ. ಅವರು ತಿಂಗಳುಗಳ ಹಿಂದೆಯೇ ಚಿತ್ರ ಪ್ರದರ್ಶನಕ್ಕೆ ಚಿತ್ರಮಂದಿರಗಳನ್ನು ಬುಕ್ ಮಾಡಿ ಮುಂಗಡ ಹಣವನ್ನೂ ಪಾವತಿಸಿದ್ದಾರೆ. ಚಿತ್ರ ಹೌಸ್ ಪುಲ್ ಆಗಿ ಓಡುತ್ತಿದ್ದರೂ ಪ್ರದರ್ಶನ ನಿಲ್ಲಿಸುವಂತೆ ಬಲವಂತ ಮಾಡುತ್ತಿರುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಮಧ್ಯಪ್ರವೇಶಿಸಿ ಜೇಮ್ಸ್ ಚಿತ್ರದ ಪ್ರದರ್ಶನಕ್ಕೆ ತಡೆಯೊಡ್ಡುತ್ತಿರುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಜೇಮ್ಸ್ ಚಿತ್ರ ಪ್ರದರ್ಶನ ನಿಲ್ಲಿಸಲು ನಡೆಯುತ್ತಿರುವ ಹುನ್ನಾರದಲ್ಲಿ ರಾಜ್ಯ ಸರ್ಕಾರವೂ ಶಾಮೀಲಾಗಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಆಡಳಿತ ಸರ್ಕಾರವನ್ನು ಪ್ರಶ್ನಿಸಿದರು .

ಪುನೀತ್ ರಾಜ್ ಕುಮಾರ್ ಅಗಲಿಕೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಬಿಜೆಪಿ ಶಾಸಕರು ಮತ್ತು ನಾಯಕರು ಕಣ್ಣೀರು ಸುರಿಸಿದ್ದಾರೆ. ಅಪಾರ ಶೋಕ ವ್ಯಕ್ತಪಡಿಸಿದ್ದಾರೆ. ಆ ಎಲ್ಲಾ ಭಾವನೆಗಳು ಪ್ರಾಮಾಣಿಕವಾದುದು ಎಂದು ನಾನು ನಂಬಿದ್ದೇನೆ. ಅದನ್ನು ಸಾಬೀತುಪಡಿಸುವ ಕಾಲ ಈಗ ಬಂದಿದೆ .

ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಉಂಟುಮಾಡುತ್ತಿರುವುದು ಕೇವಲ ಪುನೀತ್ ರಾಜ್ ಕುಮಾರ್ ಅವರಿಗೆ ಮಾಡುತ್ತಿರುವ ದ್ರೋಹ ಮಾತ್ರವಲ್ಲ, ಸಮಸ್ತ ಕನ್ನಡಿಗರಿಗೆ ಮಾಡುತ್ತಿರುವ ಅವಮಾನವೂ ಹೌದು. ಈ ಅನ್ಯಾಯವನ್ನು ಖಂಡಿಸಿ ಕನ್ನಡಿಗರೆಲ್ಲರೂ ಬೀದಿಗೆ ಇಳಿಯುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡರೆ ಒಳಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಇಡೀ ವಿಶ್ವ ಕೊಂಡಾಡುತ್ತಿರುವ ಕನ್ನಡದ ಹೆಮ್ಮೆಯ ನಟ. ನಟನೆಯಿಂದ ಮಾತ್ರವಲ್ಲದ ಸದ್ದಿಲ್ಲದೆ ಮಾಡಿದ ಸಮಾಜಮುಖಿ ಕೆಲಸಗಳಿಂದಲೂ ಜನಮನ ಗೆದ್ದಿರುವ ಅಪರೂಪದ ವ್ಯಕ್ತಿ. ಇವರ ಕೊನೆಯ ಚಿತ್ರವನ್ನು ವೀಕ್ಷಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲು ಜನ ಸಿದ್ದವಾಗಿದ್ದಾರೆ .

ಕಾಶ್ಮೀರಿ ಫೈಲ್ಸ್ ಇರಲಿ, ಇನ್ನೊಂದಿರಲಿ, ಒಂದು ಚಿತ್ರವನ್ನು ಬಲವಂತದಿಂದ ಪ್ರದರ್ಶನ ಮಾಡಿ ಜನ ನೋಡುವಂತೆ ಒತ್ತಡ ಹೇರುವುದು ಸರಿ ಅಲ್ಲ. ಗಾಂಧೀಜಿ ಬಗ್ಗೆಯೂ ಚಿತ್ರ ಬಂದಿದೆ. ಇತ್ತೀಚೆಗೆ ಜೈಭೀಮ್ ಎಂಬ ಚಿತ್ರವೂ ಬಂದಿದೆ. ಅವುಗಳನ್ನು ನೋಡಬೇಕೆಂದು ಯಾರಾದರೂ ಬಲವಂತ ಮಾಡಿದ್ದಾರಾ….? ಇಲ್ಲವಲ್ಲ .

ಪುನೀತ್ ರಾಜ್ ಕುಮಾರ್ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಕನ್ನಡಿಗರೆಲ್ಲರೂ ನೋಡಲು ಪ್ರೋತ್ಸಾಹ ನೀಡಬೇಕಿತ್ತು. ಕಾಶ್ಮೀರಿ ಫೈಲ್ಸ್ ಎಂಬ ಹಿಂದಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವಾಗ ಕನ್ನಡಿಗನೆಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳಿಗೆ ಕನ್ನಡದ ಜೇಮ್ಸ್ ನೆನಪಾಗಲಿಲ್ಲವೇ? ತೆರಿಗೆ ವಿನಾಯಿತಿಗೆ ಈಗಲೂ ಕಾಲ ಮಿಂಚಿಲ್ಲ ಆದರೆ ಸರ್ಕಾರ ಇದಕ್ಕೆ ಮುಂದಾಗುತ್ತಿಲ್ಲ ಎಂದು ಸರ್ಕಾರದ ಸುತ್ರವಿಲ್ಲದ ನೀತಿಯನ್ನು ಖಂಡಿಸಿದ್ದಾರೆ.


Spread the love