Spread the love

ಬೆಂಗಳೂರು, ಏ. 06: ಸಾಮಾಜಿಕ ಜಾಲ ತಾಣದ ಮೂಲಕ ಖ್ಯಾತಿ ಹೊಂದಿರುವ ವಕೀಲ ಜಗದೀಶ್ ಕೆ. ಎನ್. ಮಹದೇವ್ ವಿರುದ್ಧ ನಕಲಿ ಅಂಕ ಪಟ್ಟಿ ಪಡೆದ ಆರೋಪ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಸಂಗತಿ ಬೆಳಕಿಗೆ ಬಂದಿದೆ.ಐಪಿಎಸ್ ಅಧಿಕಾರಿ ಭ್ರಷ್ಟಾಚಾರ ವಿರುದ್ಧ ಸಮರ ಸಾರಿದ್ದ ಕೆ.ಎನ್.ಜಗದೀಶ್ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆ ಬಳಿಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ, ದಲಿತರನ್ನು ನಿಂದನೆ ಮಾಡಿದ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಮೂರು ಪ್ರಕರಣದಲ್ಲಿ ಜಾಮೀನು ಪಡೆದು ಜಗದೀಶ್ ಜೈಲಿನಿಂದ ಬಿಡುಗಡೆಯಾಗಿದ್ದರು. ಆ ಬಳಿಕ ತಾನು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದಾಗಿ ಪ್ರಕಟಿಸಿದ್ದರು.ಇದೀಗ ಜಗದೀಶ್ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದ್ದು, ಅದರ ಎಫ್‌ಐಆರ್ ಪ್ರತಿ ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದೆ.ನಾಗರಭಾವಿ ನಿವಾಸಿ ವೆಂಕಟೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸರು ನಕಲಿ ದಾಖಲೆ ಸೃಷ್ಟಿ, ವಂಚನೆ ಅರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 420, 465, 468, 471, 120b ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.ದೂರಿನಲ್ಲೇನಿದೆ ?: ಜಗದೀಶ್ ಕೆ.ಎನ್. ಮಹದೇವ್ ಪಿಯುಸಿ ಅಂಕಪಟ್ಟಿ ಜೆರಾಕ್ಸ್ ಪ್ರತಿಯನ್ನು ಅವರ ಫೇಸ್ ಬುಕ್ ನಲ್ಲಿ ಹಾಕಿದ್ದು, ಅವರ ಅಭಿಮಾನಿಯಿಂದ ಪಡೆದು ಪರಿಶೀಲನೆ ನಡೆಸಿದಾಗ ಜಗದೀಶ್ ಅವರು ಪಿಯುಸಿ ಅಂಕಪಟ್ಟಿ ರಾಜಸ್ಥಾನ ವಿದ್ಯಾಪೀಠ, ಉದಯಪುರ ಡೀಮ್ಡ್ ಟು.ಬಿ. ಯೂನಿವರ್ಸಿಟಿ ಪ್ರೀಯೂನಿವರ್ಸಿಟಿಯಲ್ಲಿ ಪಡೆದಿರುತ್ತಾರೆ. ಸೀರಿಯಲ್ ನಂ. 1440 ರೋಲ್ ನಂಬರ್ 1223 ಎನ್ ರೋಲ್ ನಂ. ಡಿಪಿಯುಸಿ 2ಕೆ2/20114 ಎಂದು ಇದೆ, ಒಟ್ಟು 600 ಅಂಕಕ್ಕೆ 388 ಅಂಕ ಪಡೆದಿರುವುದಾಗಿ ಮಾಹಿತಿ ಇರುತ್ತದೆ. 2003 ರಲ್ಲಿ ತೇರ್ಗಡೆಯಾಗಿರುವುದಾಗಿ ತಿಳಿದು ಬಂದಿರುತ್ತದೆ. ಆದರೆ, ಮಾಧ್ಯಮಿಕ ಶಿಕ್ಷಣಾ ಬೋರ್ಡ್ ಅಜಮೇರ್ ಇವರಿಂದ ಪಡೆದ ಮಾಹಿತಿ ಅನ್ವಯ ರಾಜಸ್ಥಾನ ವಿದ್ಯಾಪೀಠ ಉದಯಪುರ ಡೀಮ್ಡ್ ವಿವಿ ಮಾನ್ಯತೆ ಪಡೆದಿಲ್ಲ, ಈ ವಿವಿ ನೀಡುವ ಅಂಕ ಪಟ್ಟಿಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಬಳಿಕ ರಾಜಸ್ಥಾನ ಸೆಕೆಂಡರಿ ಎಜುಕೋಷನ್ ಬೊರ್ಡ್ ನಿಂದ ಸಹ ಈ ಸಂಸ್ಥೆ ಮಾನ್ಯತೆ ಪಡೆದಿಲ್ಲ. ಆ ಬಳಿಕ ಭಾರತೀಯ ವಿದ್ಯಾಲಯ ಶಿಕ್ಷಾ ಬೋರ್ಡ್ ಮಂಡಳಿಯಲ್ಲಿ ಸಹ ನೋಂದಣಿ ಅಗಿರುವುದಿಲ್ಲ.ರಾಜಸ್ಥಾನ ವಿದ್ಯಾಪೀಠ ಕೇವಲ ತನ್ನ ರಾಜ್ಯ ವ್ಯಾಪ್ತಿಗೆ ಸೀಮಿತ ಹೊಂದಿದ್ದು, ಬೇರೊಂದು ವಿಶ್ವ ವಿದ್ಯಾಲಯದ ಮೂಲಕ ಕೋರ್ಸ್ ಗಳನ್ನು ಪರಿಚಯಿಸಿ ವಿದ್ಯಾರ್ಥಿಗಳ ಪ್ರವೇಶ ಪಡೆದು ಪ್ರಮಾಣ ಪತ್ರ ನೀಡುವಂತಿಲ್ಲ. ಈ ರಾಜಸ್ಥಾನ ವಿದ್ಯಾಪೀಠ ಡೀಮ್ಡ್ ವಿವಿ ಕರ್ನಾಟಕದಲ್ಲಿ ಯಾವುದೇ ಅಂಗ ಸಂಸ್ಥೆ ಹೊಂದಿಲ್ಲ. ಹೀಗಾಗಿ 2002-03 ನೇ ಸಾಲಿನಲ್ಲಿ ಕೆಲವು ವ್ಯಕ್ತಿಗಳೊಂದಿಗೆ ಸೇರಿಕೊಂಡು ನಕಲಿ ಅಂಕಪಟ್ಟಿ ತಯಾರಿಸಿ ಆ ಅಂಕ ಪಟ್ಟಿಗಳನ್ನು ಪದವಿ ಹಾಗೂ ಕಾನೂನು ಪದವಿಗೆ ಬಳಿಸಿ ಜಗದೀಶ್ ವಂಚನೆ ಮಾಡಿರುತ್ತಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಅಶೋಕನಗರದ ಅಕ್ಕಿ ತಿಮ್ಮನಹಳ್ಳಿ ಬಳಿ ಕೆಲ ವ್ಯಕ್ತಿಗಳೊಂದಿಗೆ ಸೇರಿಕೊಂಡು ಜಗದೀಶ್ ನಕಲಿ ಅಂಕಪಟ್ಟಿ ಪಡೆದುಕೊಂಡಿರುತ್ತಾರೆ. ಈ ಅಂಕಪಟ್ಟಿಗಳನ್ನು ಕುವೆಂಪು ವಿವಿಗೆ ಸಲ್ಲಿಸಿ 2009 ರಲ್ಲಿ ಬಿಬಿಎಂ ಪ್ರಮಾಣ ಪತ್ರ ಪಡೆದಿರುತ್ತಾರೆ. ಅಲ್ಲದೇ ರಾಜ್ಯ ಕಾನೂನು ವಿದ್ಯಾಲಯಕ್ಕೆ ಸಲ್ಲಿಸಿ ಕಾನೂನು ಪದವಿ ಪಡೆದಿದ್ದಾರೆ. ಈ ವಿಷಯ ತಿಳಿದು ಮೋಸ ಮಾಡಿರುವ ಜಗದೀಶ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ದೂರು ದಾರರು ಮನವಿ ಮಾಡಿದ್ದಾರೆ.
ಕೋರ್ಟ್ ಆವರಣದಲ್ಲಿ ಗಲಾಟೆ ನಡೆದ ಪ್ರಕರಣದಲ್ಲಿ ಜೈಲಿನಲ್ಲಿದ್ದ ವೇಳೆ ಜಗದೀಶ್ ವಿರುದ್ಧ ದಾಖಲಿಸಿದ ಪ್ರಕರಣದ ಬಗ್ಗೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದ್ದು ಗಮನಾರ್ಹ. ಇದೀಗ ನಕಲಿ ಅಂಕಪಟ್ಟಿ ಪಡೆದ ಆರೋಪದಡಿ ಜಗದೀಶ್ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ. ನಕಲಿ ಅಂಕಪಟ್ಟಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ಕೇಳಲು ಜಗದೀಶ್ ಅವರ ಪ್ರತಿಕ್ರಿಯೆ ಪಡೆಯುವ ಪ್ರಯತ್ನ ವಿಫಲವಾಯಿತು.


Spread the love