Spread the love

ಬೆಂಗಳೂರು: ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ( Karnataka Lokayukta ) ಪರ್ಯಾಯವಾಗಿ ಎಸಿಬಿ ರಚಿಸಿ ಆದೇಶಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಇದೀಗ ಕರ್ನಾಟಕ ಹೈಕೋರ್ಟ್ ಎಸಿಬಿ ರಚನೆಯನ್ನು ( ACB ) ರದ್ದು ಪಡಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ.

ಇಂದು ಈ ಸಂಬಂಧ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರಿದ್ದಂತ ನ್ಯಾಯಪೀಠವು, ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿತು.

ಇನ್ನೂ ರಾಜ್ಯ ಸರ್ಕಾರ ಎಸಿಬಿ ರಚನೆ ಮಾಡಿ ಹೊರಡಿಸಿದ್ದಂತ ಆದೇಶವನ್ನು ರದ್ದು ಪಡಿಸಿದೆ. ಅಲ್ಲದೇ ಎಸಿಬಿಗೆ ಪೊಲೀಸ್ ಠಾಣೆ ಸ್ಥಾನ ಮಾನ ನೀಡಿದ್ದನ್ನು ಕೋರ್ಟ್ ರದ್ದುಪಡಿಸಿದೆ. ಜೊತೆಗೆ ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಮೂಲಕ ಲೋಕಾಯುಕ್ತ ಪೊಲೀಸರಿಗೆ ಮಹತ್ವದ ಅಧಿಕಾರವನ್ನು ನೀಡಿದೆ.

ಎಸಿಬಿಯ ಎಲ್ಲಾ ಪ್ರಕರಣಗಳೂ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆ ಮಾಡಬೇಕು ಎಂಬುದಾಗಿಯೂ ಆದೇಶದಲ್ಲಿ ತಿಳಿಸಿದೆ. ಹೀಗಾಗಿ ಮತ್ತೆ ಲೋಕಾಯುಕ್ತಕ್ಕೆ ಹೊಸ ಕಳೆ ಬಂದಂತೆ ಆಗಿದೆ.


Spread the love