Spread the love

ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ವಿರೋಧಿಸಿ ಎಸ್.ಎಫ್.ಐ, ಡಿ.ವಿ.ಪಿ ಮತ್ತು ಪ್ರಗತಿಪರ ಸಂಘಟನೆಗಳು ಪ್ರತಿಭಟಿಸುತ್ತಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಮತ್ತು ವಿವಿಯಲ್ಲಿ ವಿದ್ಯಾರ್ಥಿ ವಿರೋಧಿಯಾದ ಯಾವುದೇ ನಿಲುವುಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೆಂಕಟೇಶ್ವರಲು ತಿಳಿಸಿದ್ದಾರೆ.
ತುಮಕೂರು ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ವಿರೋಧಿಸಿ ಎಸ್.ಎಫ್.ಐ, ಡಿ.ವಿ.ಪಿ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಕುಲಪತಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಭರವಸೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ವಿವಿಯಲ್ಲಿ ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡಬಾರದು. ಮಾಡಿದರೆ ಜಿಲ್ಲೆಯಲ್ಲಿ ಪ್ರತಿಭಟನೆಗಳನ್ನು ತೀವ್ರಗೊಳಿಸಲಾಗುವುದು ಎಂಬುದನ್ನು ಕುಲಪತಿಗಳ ಗಮನಕ್ಕೆ ತರಲಾಯಿತು. ಈ ಹಿನ್ನೆಲೆಯಲ್ಲಿ ಕುಲಪತಿಗಳು ವಿದ್ಯಾರ್ಥಿ ವಿರೋಧಿ ಪೀಠಗಳನ್ನು ವಿವಿಯಲ್ಲಿ ಜಾರಿಗೊಳಿಸುವುದಿಲ್ಲ ಎಂದು ಭರವಸೆ ನೀಡಿದರು.
ಭಾರತೀಯ ಶರಣ ಸೇನಾ ಜಿಲ್ಲಾಧ್ಯಕ್ಷ ರವಿಕುಮಾರ ರಾಯಸಂದ್ರ ಮಾತನಾಡಿ, ವಿವಿಯು ಸಾವರ್ಕರ್ ಅಧ್ಯಯನ ಪೀಠದಿಂದ ಹಿಂದೆ ಸರಿಯದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ವಿಶ್ವವಿದ್ಯಾಲಯದಲ್ಲಿ ಯಾವುದೇ ಕಾರಣಕ್ಕೂ ವಿಷಬೀಜ ಬಿತ್ತಲು ಬಿಡುವುದಿಲ್ಲ. ಜಾತ್ಯತೀತ ಮೌಲ್ಯಗಳಿಗಾಗಿ ವಿವಿಯು ಹೆಚ್ಚು ಗಮನಹರಿಸಬೇಕಾಗಿದೆ. ಹಾಲಿ ಇರುವ ಸಿಂಡಿಕೇಟ್ ಸದಸ್ಯರು ವಿವಿಯ ಕ್ಯಾಂಪಸ್ ನಿರ್ಮಾಣಕ್ಕಾಗಿ ಮತ್ತು ಇರುವ ಅಧ್ಯಯನ ಪೀಠಗಳ ಅಭಿವೃದ್ಧಿಗೆ ಹೆಚ್ಚು ಗಮನಹರಿಸಬೇಕಾಗಿದೆ. ಅನಗತ್ಯವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಿಲ್ಲದ ವಿಚಾರಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್ ಮಾತನಾಡಿ, ಕುಲಪತಿಗಳು ಸಾವರ್ಕರ್ ಪೀಠಕ್ಕೆ ಯಾವುದೇ ಕಾರಣಕ್ಕೂ ಮುಂದಾಗಬಾರದು. ಒಂದು ವೇಳೆ ಜಾರಿಯಾದರೆ ನಾಲ್ಕು ವರ್ಷಗಳ ಕಾಲ ನಿರಂತರ ಹೋರಾಟಗಳು ಮುಂದುವರಿಯಲಿವೆ ಎಂದು ಎಚ್ಚರಿಕೆ ನೀಡಿದರು.
ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ ಸಾವರ್ಕರ್ ಬಗ್ಗೆ ಅಧ್ಯಯನ ಮಾಡಲು ಸಮಾಜಕ್ಕೆ ಬೇಕಾಗುವಂತಹ ಯಾವುದೇ ವಿಚಾರಗಳು ಇರುವುದಿಲ್ಲ. ಆದ್ದರಿಂದ ವಿವಿಯಲ್ಲಿ ಅನಗತ್ಯವಾದ ಚರ್ಚೆ ಮಾಡಬಾರದು. ಕುಲಪತಿಗಳು ಮತ್ತು ಸಿಂಡಿಕೇಟ್ ಸಮಿತಿ ವಿವಿಯ ಅಭಿವೃದ್ಧಿ ಕಡೆ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಸಾವರ್ಕರ್ ಪೀಠವನ್ನು ಸ್ಥಾಪನೆ ಮಾಡಬಾರದು ಎಂದು ಹೇಳಿದರು.
ಎಸ್.ಯು.ಸಿಐ ಮುಖಂಡ ಎಸ್.ಎನ್. ಸ್ವಾಮಿ ಮಾತನಾಡಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಸಮಾಜಕ್ಕೆ ಮತ್ತು ಜಾತ್ಯತೀತ ನಿಲುವುಗಳಿಗೆ ಬದ್ದರಾಗಿರುವ ಅನೇಕ ಮಹನೀಯರು ಇದ್ದಾರೆ ಇವರ ಬಗ್ಗೆ ಗಮನಹರಿಸಬೇಕು. ಜೊತೆಗೆ ವಿವಿ ಅನಗತ್ಯ ಗೊಂದಲಕ್ಕೆ ತೆರೆ ಎಳೆಯಬೇಕು ಎಂದರು.
ತುಮಕೂರು ಜಿಲ್ಲಾ ಪ್ರಗತಿಪರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಮೇಶ್ ಮಾತನಾಡಿ, ಹಾಲಿ ಇರುವ 14 ಪೀಠಗಳಿಗೆ ಇದುವರೆಗೂ ಸಂಶೋಧನೆ ನಡೆಸಲು ಒಬ್ಬೇ ಒಬ್ಬ ವಿದ್ಯಾರ್ಥಿಗೂ ವಿವಿಯು ಅವಕಾಶ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಅನಗತ್ಯವಾಗಿ ಸಮಾಜ ವಿರೋಧಿಗಳನ್ನು ವಿವಿಯಲ್ಲಿ ಪರಿಚಯಿಸುವುದು ಬೇಡ ಎಂದು ಸಲಹೆ ನೀಡಿದರು.
ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ರಂಗಧಾಮಯ್ಯ ಮಾತನಾಡಿ, ವಿವಿಗಳು ವಿಚಾರ ವಿನಿಮಯ ಕೇಂದ್ರಗಳಾಗಬೇಕು. ಬದಲಾಗಿ ಸಾವರ್ಕರ್ ಅವರಂತಹ ದೇಶವಿರೋಧಿ ಕೇಂದ್ರಗಳಾಗಬಾರದು. ಯಾವುದೇ ಕಾರಣಕ್ಕೂ ವಿವಿಯಲ್ಲಿ ಇವರ ಪೀಠ ಅಗತ್ಯವಿಲ್ಲ ಎಂದರು.
ಸಭೆಯಲ್ಲಿ ಜಿ.ಕೆ.ನಾಗಣ್ಣ, ಎಐಡಿಎಸ್ಓ ಕಲ್ಯಾಣಿ, ದಲಿತ ವಿದ್ಯಾರ್ಥಿ ಪರಿಷತ್ ಅಜಿತ್ ಕುಮಾರ್ .ಓ.ಬೆಳ್ಳಿ ಬಟ್ಲು ಇತರರು ಹಾಜರಿದ್ದರು.
ವರದಿ:ಶಶಿವರ್ಧನ್, ನಗರಾಧ್ಯಕ್ಷ ಎಸ್.ಎಫ್.ಐ.


Spread the love