Spread the love

ತುಮಕೂರು : ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪದವಿ ಕಾಲೇಜುಗಳು ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳ ಅವೈಜ್ಞಾನಿಕ ಪರೀಕ್ಷಾ ಶುಲ್ಕ ವಿರೋಧಿಸಿ ಶುಲ್ಕವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿ ಎಸ್.ಎಫ್.ಐ ಕಾರ್ಯಕರ್ತರು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ಈ. ಶಿವಣ್ಣ, ವಿಶ್ವವಿದ್ಯಾಲಯದಲ್ಲಿ ಪರೀಕ್ಷ ಶುಲ್ಕಗಳು, ದಾಖಲಾತಿ ಶುಲ್ಕಗಳು ಅವೈಜ್ಞಾನಿಕವಾಗಿದ್ದು ವಿವಿ ವ್ಯಾಪ್ತಿಗೆ ಬರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಒಂದೊಂದು ಕಾಲೇಜಿನಲ್ಲಿ ಒಂದೊಂದು ರೀತಿಯ ಶುಲ್ಕಗಳನ್ನು ಪಾವತಿಸಿಕೊಳ್ಳಲಾಗುತ್ತಿದೆ. ಇದರಿಂದ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಹೀಗಾಗಿ ಹೆಚ್ಚಿಸಿರುವ ಶುಲ್ಕವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.ಲಾಕ್ಡೌನ್ ಸಂದರ್ಭದಲ್ಲಿ ಪರೀಕ್ಷಾ ಶುಲ್ಕಗಳನ್ನು ಪಾವತಿಸಿಕೊಳ್ಳಲಾಗಿದ್ದು, ಕೆಲವು ಪದವಿ ಪರೀಕ್ಷೆಗಳು ನಡೆಯದಿದ್ದರೂ ಸಹ ಶುಲ್ಕ ಕಟ್ಟಿಸಿಕೊಳ್ಳಲಾಗಿದೆ ಮತ್ತು ಅದನ್ನು ಹಿಂದಿರುಗಿಸುತ್ತೇವೆ ಎಂದು ಹೇಳಿಯೂ ವಾಪಸ್ ನೀಡಿಲ್ಲ. ಮತ್ತೆ ಒಂದೇ ವರ್ಷದಲ್ಲಿ ಮೂರು ಮೂರು ಬಾರಿ ಪರೀಕ್ಷಾ ಶುಲ್ಕವನ್ನು ಪಾವತಿಸಿಕೊಳ್ಳಲಾಗಿದೆ. ಇದರಿಂದ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ವಿಶ್ವವಿದ್ಯಾಲಯವು ಶುಲ್ಕ ಪಾವತಿಯ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಮುಂದಾಬೇಕು ಎಂದರು.ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವಂತಹ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಏಕರೂಪದ ದಾಖಲಾತಿ ಶುಲ್ಕ ಮತ್ತು ಪರೀಕ್ಷಾ ಶುಲ್ಕಗಳನ್ನು ಜಾರಿ ಮಾಡಬೇಕು. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ ಆದರೂ ಸಹ ವಿದ್ಯಾರ್ಥಿನಿಯರಿಂದ ಹೆಚ್ಚುವರಿ ಶುಲ್ಕವನ್ನು ಪಡೆದುಕೊಳ್ಳಲಾಗುತ್ತಿದೆ. ಇದನ್ನು ಸರಿಪಡಿಸಲು ಮುಂದಾಗಬೇಕು ಎಂದು ಹೇಳಿದರು.ಭಾರತ ವಿದ್ಯಾರ್ಥಿ ಫೆಡರೇಷನ್ ತುಮಕೂರು ನಗರಾಧ್ಯಕ್ಷ ಶಶಿವರ್ಧನ್ ಮಾತನಾಡಿ, ಜಿಲ್ಲೆಯ ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ವಿದ್ಯಾರ್ಥಿಗಳೇ ಹೆಚ್ಚು ವ್ಯಾಸಂಗ ಮಾಡುತ್ತಿದ್ದು ಅವರಿಗೆ ಇಷ್ಟೊಂದು ಪ್ರಮಾಣದ ಪರೀಕ್ಷಾ ಶುಲ್ಕ ಪಾವತಿಸಲು ಕಷ್ಟವಾಗುತ್ತಿದೆ.ಎಸ್ಸಿ, ಎಸ್ಟಿ ಮತ್ತು ಓಬಿಸಿ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ದಾಖಲಾತಿ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ದಾಖಲಾತಿ ಶುಲ್ಕವನ್ನು ಬಹುತೇಕ ಕಾಲೇಜುಗಳಲ್ಲಿ ಪಾವತಿಸಿಕೊಳ್ಳಲಾಗಿದ್ದು, ಅವರಿಗೆ ಶುಲ್ಕ ವಿನಾಯಿತಿ ನೀಡಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಗಮನ ಹರಿಸಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ಜಿ.ಕೆ.ನಾಗಣ್ಣ ಮಾತನಾಡಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಶುಲ್ಕಕ್ಕೆ ಸಂಬಂಧಿಸಿದಂತೆ ಗೊಂದಲಗಳಿವೆ. ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ದಿನಾಂಕವನ್ನು ವಿಸ್ತರಿಸಬೇಕು. ಶುಲ್ಕ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು ಅದನ್ನು ಸರಿಪಡಿಸಲು ವಿವಿ ಮುಂದಾಗಬೇಕು ಎಂದು ಒತ್ತಾಯಿಸಿದರು. ಬಹುತೇಕ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನವನ್ನು ಸಹ ನೇರವಾಗಿ ಕಾಲೇಜಿಗೆ ಕಳುಹಿಸಲಾಗುತ್ತಿದೆ. ಅದನ್ನು ಸಹ ವಿದ್ಯಾರ್ಥಿಗಳಿಗೆ ವಾಪಸ್ಸು ನೀಡುತ್ತಿಲ್ಲ. ಇದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ದಾಖಲಾತಿ ಶುಲ್ಕ ಮತ್ತು ಪರೀಕ್ಷಾ ಶುಲ್ಕಗಳಲ್ಲಿ ಗೊಂದಲಗಳು ಉಂಟಾಗಿರುತ್ತದೆ. ಆದ್ದರಿಂದ ತುಮಕೂರು ವಿಶ್ವವಿದ್ಯಾಲಯವು ಕೂಡಲೇ ವಿದ್ಯಾರ್ಥಿಗಳಿಗೆ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಮತ್ತು ಈಗಾಗಲೇ ಏರಿಕೆ ಮಾಡಿರುವ ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸಿ ಪಾವತಿಸಿಕೊಳ್ಳಬೇಕು ಮತ್ತು ವಿಶ್ವವಿದ್ಯಾಲಯ ನಿರ್ಲಕ್ಷ್ಯ ವಹಿಸಿದರೆ ವಿದ್ಯಾರ್ಥಿ ಹೋರಾಟ ತೀವ್ರಗೊಳ್ಳದೆ ಎಂದು ಹೇಳಿದರು. ನಂತರ ಮೌಲ್ಯಾಮಾಪನ ಕುಲಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು ಪ್ರತಿಭಟನೆಯಲ್ಲಿ ನವೀನ್, ಅಜಯ್, ಪಾವನಿ, ಸೌಮ್ಯ, ಶಶಿಕಲಾ, ರಾಧಿಕ, ಚಂದ್ರಕಲಾ, ಸೂಫಿಯ, ಪಾವನ ಮೊದಲಾದವರು ಉಪಸ್ಥಿತರಿದ್ದರು. ವರದಿ:ಸಿಂಚನ ಮತ್ತು ಶೋಭಾರಾಣಿ


Spread the love