Spread the love

ಕಾಂಗ್ರೆಸ್ಸಿನ ಭಾರತ್ ಜೋಡೊ ಸಂಘೀ ಫ಼್ಯಾಸಿಸಂಗೆ ಸವಾಲಾಗಬಹುದೇ?

ಭಾರತಕ್ಕೆ ಇಂದು
ಅತ್ಯಗತ್ಯವಾಗಿರುವ ಪ್ರೀತಿ, ಸಾಮಾಜಿಕ ಒಳಗೊಳ್ಳುವಿಕೆ, ಒಕ್ಕೂಟ ತತ್ವಗಳ ಆಶಯಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಜೋಡೊ ಪಾದಯಾತ್ರೆಯು ಇನ್ನೇನು ಕರ್ನಾಟಕವನ್ನು ಪ್ರವೇಶಿಸಲಿದೆ.

ಕೇರಳದಲ್ಲಿ ಅದಕ್ಕೆ ಅಪಾರ ಜನಸ್ಪಂದನೆ ಸಿಕ್ಕಿದೆ. ಅಲ್ಲದೆ ಜನರನ್ನು ಮುಟ್ಟದ ಹಾಗೂ ಮುಟ್ಟಿಸಿಕೊಳ್ಳದ ಭಾರತದ ರಾಜಕೀಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಜನಸಾಮಾನ್ಯರೊಡನೆ ಬೆರೆಯುತ್ತಿರುವ ರೀತಿಗೆ ವ್ಯಾಪಕ ಮೆಚ್ಚುಗೆ ಸಿಗುತ್ತಿದೆ. ಇದು ಕಾಂಗ್ರೆಸ್ ವಲಯಗಳಿಗಿಂತ ಹೆಚ್ಚಾಗಿ ಕಾಂಗ್ರೆಸ್ ಒಂದು ನೈಜ ಪರ್ಯಾಯವಾಗಲಿ ಅಂದು ಆಶಿಸುತ್ತಿರುವ ಪ್ರಗತಿಪರರಲ್ಲಿ ಒಂದು ಹೊಸ ಉತ್ಸಾಹಕ್ಕೆ ಕಾರಣವಾಗಿದೆ. ಭಾರತ್ ಜೋಡೊ ಕಾರ್ಯಕ್ರಮಕ್ಕೆ ನಾಗರಿಕ ಸಮಾಜದ ಬೆಂಬಲವನ್ನೂ ಕಾಂಗ್ರೆಸ್ ಕೋರಿರುವುದರಿಂದ ಪ್ರಗತಿಪರ ವಲಯದ ವ್ಯಕ್ತಿಗಳು ಮತ್ತು ಸಂಘಟನೆಗಳು ಕಾಂಗ್ರೆಸ್ ಬಗ್ಗೆ ತಮಗಿದ್ದ ಮೂಲಭೂತ ರಾಜಕೀಯ ತಕರಾರುಗಳನ್ನೆಲ್ಲಾ ಪಕ್ಕಕ್ಕಿಟ್ಟು ಜೋಡೊ ಜೊತೆ, ಕೆಲವರು ಬೇಶರತ್ತಾಗಿ, ಕೆಲವರು ಶರತ್ತಿನ ಆಧಾರದಲ್ಲಿ, ಒಟ್ಟಿನಲ್ಲಿ ’ಕೈಗೂಡಿಸುತ್ತಿದ್ದಾರೆ.

ಚುನಾವಣಾ ಲೆಕ್ಕಾಚಾರವಿದ್ದರೆ ತಪ್ಪೇನು?

ಭಾರತ್ ಜೋಡೊ ಯಾತ್ರೆಯ ಹಿಂದೆ ಇರುವುದು ಚುನಾವಣಾ ಲೆಕ್ಕಾಚಾರಕ್ಕೆ ಮೀರಿದ ಆಶಯಗಳು ಎಂಬ ಬಗ್ಗೆ ಪ್ರಗತಿಪರರ ಆಶಯಗಳು ಮತ್ತು ನಿರೀಕ್ಷೆಗಳು ಏನೇ ಇದ್ದರೂ ಕಾಂಗ್ರೆಸ್ಸಿನ ನಾಯಕತ್ವ ಮಾತ್ರ ಅದರ ಬಗ್ಗೆ ಸ್ಪಷ್ಟವಾಗಿದೆ. ಈ ದೇಶದ ಅತ್ಯಂತ ಹಳೆಯ ಹಾಗೂ ಬಿಜೆಪಿ ಬಿಟ್ಟರೆ (ಶೇ.೩೬ ರಷ್ಟು ಜನಬೆಂಬಲ-೨೦೧೯ರ ಚುನಾವಣೆಯಲ್ಲಿ) ಅತಿ ಹೆಚ್ಚು ಜನಬೆಂಬಲವನ್ನು (ಶೇ.೧೯) ಪಡೆದಿರುವ ಕಾಂಗ್ರೆಸ್ ಪಕ್ಷ ಚುನಾವಣಾ ದೃಷ್ಟಿಯಿಂದಲೇ ಇದ್ದರೂ ತಡವಾಗಿಯಾದರೂ ಜನರನ್ನು ದೊಡ್ಡಮಟ್ಟದಲ್ಲಿ ತಲುಪುವ ಪ್ರಯತ್ನ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಕಾಂಗ್ರೆಸ್ಸಿನ ಕಟ್ಟು ವಿಮರ್ಶಕರೂ ಅಭಿಪ್ರಾಯ ಪಡುತ್ತಾರೆ.

ಕಾಂಗ್ರೆಸ್ ಪಕ್ಷದ ಬಗ್ಗೆ ಸಹಾನುಭೂತಿ ಇರುವ ರಾಜಕೀಯ ವಿಶ್ಲೇಷಕರೇ ಬರೆಯುತ್ತಿರುವಂತೆ ಇದು ಕಾಂಗ್ರೆಸ್ಸಿನ ಪುನರುತ್ಥಾನ ಮಾಡುವ ಯಾತ್ರೆಯಲ್ಲ.. ಬದಲಿಗೆ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಉಳಿದುಕೊಳ್ಳಲು ಮಾಡುತ್ತಿರುವ ಯಾತ್ರೆ ಆಗಿದೆ. ಆದ್ದ್ದರಿಂದಲೇ ಯಾತ್ರೆಯನ್ನು ಬರಲಿರುವ 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈಗಿನಕ್ಕಿಂತ ಹೆಚ್ಚಿನ ಸೀಟುಗಳನ್ನು ಮತ್ತು ಓಟುಗಳನ್ನು ಪಡೆದುಕೊಳ್ಳಲು ಸಾಧ್ಯವಿರುವ ರಾಜ್ಯಗಳನ್ನೇ ಪ್ರಧಾನವಾಗಿ ಹಾದುಹೋಗುವಂತೆ ರೂಪಿಸಲಾಗಿದೆ. ತಮಿಳುನಾಡನ್ನೂ ಒಳಗೊಂಡಂತೆ ದೇಶದ ಪೂರ್ವ ಭಾಗದ (ತೆಲಂಗಾಣ, ಆಂಧ್ರ, ಒರಿಸ್ಸಾ, ಪ. ಬಂಗಾಳ) ರಾಜ್ಯಗಳಲ್ಲಿ 2014, 2019ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೀನಾಯವಾಗಿತ್ತು. ಅದರ ಬದಲಿಗೆ ಯಾತ್ರೆ ಹಾದುಹೋಗುವ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತ ಸಂದರ್ಭದಲ್ಲೂ ಪ್ರತಿಸ್ಪರ್ಧೆ ಒಡ್ಡುವಷ್ಟು ಓಟುಗಳಿವೆ. ಅದರ ಜೊತೆಗೆ ಈ ಚುನಾವಣೆಯಲ್ಲಿ ಬಿಜೆಪಿ ಯ ಬಗ್ಗೆ ಬೇಸರಿಸಿಕೊಂಡಿರುವ ಶೇ.10-15 ಮತದಾರರನ್ನು ಒಲಿಸಿಕೊಂಡರೆ, ಈ ಬಾರಿ ನೂರರ ಸಮೀಪವಾಗುವಷ್ಟಾದರೂ ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ಸಿನ ಗುರಿ. ಅದೇ ಭಾರತ್ ಜೋಡೊ ಉದ್ದೇಶ. ಭಾರತ್ ಜೋಡೊವಿನ ತಂತ್ರ-ಯೋಜನೆಗಳೂ ಕೂಡಾ ಪ್ರಧಾನವಾಗಿ ಈ ಹೆಚ್ಚುವರಿ ಮತದಾರರನ್ನೇ ಉದ್ದೇಶಿಸಿದೆ. ಭಾರತ್ ಜೋಡೊ ವಿನ ಕ್ಯಾಲೆಂಡರ್ ಕೂಡ ಇದಕ್ಕೆ ತಕ್ಕ ಹಾಗೆ ಸಿದ್ಧವಾಗಿದೆ.

ಇದು ಕಾಂಗ್ರೆಸ್ ಪಕ್ಷ ತಡವಾಗಿಯಾದರೂ ಇಂದಿನ ಕಾಲಸಂದರ್ಭಕ್ಕೆ ತಕ್ಕಹಾಗೆ ಎಚ್ಚೆತ್ತುಕೊಂಡು ತನ್ನ ರಾಜಕೀಯಕ್ಕೆ ಬೇಕಾದ ಕಾರ್ಯ ತಂತ್ರಗಳನ್ನು ನೇಯುತ್ತಿರುವುದನ್ನು ಸೂಚಿಸುತ್ತಿದೆ. ಹಾಗೂ ತನ್ನದೇ ಚುನಾವಣಾ ರಾಜಕಾರಣಕ್ಕೆ ಬೇಕಾದ ಘೋಷಣೆಗಳನ್ನು ರೂಪಿಸಿದ್ದರೂ, ಅದು ಬಿಜೆಪಿಯ ದ್ವೇಷ ರಾಜಕೀಯಕ್ಕೆ ಬದಲಾದ ಪ್ರೀತಿಯ ಘೋಷಣೆ ಆಗಿದೆ.

ಇದರಿಂದ ಒಂದೋ ಪ್ರೀತಿಯ ರಾಜಕೀಯ ಜನರನ್ನು ತಲುಪಿದರೆ ಒಳ್ಳೆಯದೇ ಆಗುತ್ತದೆ. ಕಾಂಗ್ರೆಸ್ಸಿಗೂ. ಸಮಾಜಕೂ. ಅಥವಾ ಇದರಿಂದ ನಿರೀಕ್ಷೆಯಷ್ಟು ಯಶ ಸಿಗದಿದ್ದರೆ, ಕಾಂಗ್ರೆಸ್ಸಿಗೆ ಹೆಚ್ಚಿನ ಚುನಾವಣಾ ಪ್ರಯೋಜನವಾಗಲಾರದೆ ಹೋಗಬಹುದು. ಹೀಗಾಗಿ ಇದನ್ನು ಕಾಂಗ್ರೆಸ್ ವಿರೋಧಿಗಳೂ ಸಹ ಸಕ್ರಿಯವಾಗಿ ವಿರೋಧಿಸಲು ಯಾವುದೇ ಕಾರಣವಿಲ್ಲ.

ಪ್ರಗತಿಪರರ ಉತ್ಪ್ರೇಕ್ಷಿತ ನಿರೀಕ್ಷೆಗಳ ಅಪಾಯ:

ಆದರೆ ಜೋಡೋ ವನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ಸೇತರ ಪ್ರಗತಿಪರರ ಆಶಯಗಳು ಕಾಂಗ್ರೆಸ್ಸಿನ ಸೀಮಿತ ಗುರಿಗಳಿಗಿಂತ ಹಿರಿದಾದದ್ದು. ಹೀಗಾಗಿ ಸಹಜವಾಗಿ ಅವರ ಜೋಡೊ ಇಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿಯೇ ಅದನ್ನು ಬೆಂಬಲಿಸುತ್ತಿರುವ ಕೆಲವು ಪ್ರಗತಿಪರ ಮುತ್ಸದ್ಧಿಗಳು ಈ ಭಾರತ್ ಜೋಡೊ ಮೇಲೆ ” ಪ್ರಜೆ ಯನ್ನು ತಂತ್ರದೊಡನೆ ಜೋಡಿಸಿ ಪ್ರಜಾತಂತ್ರವಾಗಿಸುವ , ಗಣವನ್ನು ರಾಜ್ಯದೊಡನೆ ಜೋಡಿಸಿ ನೈಜ ಗಣರಾಜ್ಯವಾಗಿಸುವ, ಕರ್ಮವನ್ನು ಮರ್ಮದೊಂದಿಗೆ ಜೋಡಿಸಿ ಸಾರ್ಥಕಗೊಳಿಸುವ.. ” ಇನ್ನಿತ್ಯಾದಿ ಪ್ರಾಸಬದ್ಧ ಆದರೆ ತ್ರಾಸದಾಯಕ ಉದ್ದೇಶಗಳನ್ನು ಆರೋಪಿಸುತ್ತಿದ್ದಾರೆ.

ಸಂಘಪರಿವಾರ ಮತ್ತು ಬಿಜೆಪಿ ಸರ್ಕಾರ ಕಳೆದ ಎಂಟು ವರ್ಷಗಳಿಂದ ಭಾರತದ ಸಮಾಜಿಕ ಹಂದರದ ಮೇಲೆ ಮಾಡುತ್ತಿರುವ ನಿರಂತರ ದಾಳಿ, ಸಮಾಜದಲ್ಲಿ ಹೆಚ್ಚುತ್ತಿರುವ ಕೋಮು ಧೃವೀಕರಣ, ಕಂಡುಕೇಳರಿಯದ ದ್ವೇಷ ರಾಜಕಾರಣ, ಆರ್ಥಿಕ ಬಿಕ್ಕಟ್ಟುಗಳು, ಪ್ರಜಾತಾಂತ್ರಿಕ ಸಂಸ್ಥೆಗಳ ಸಾರ್ವತ್ರಿಕ ಅಧಃ ಪತನ ಹಾಗೂ ಸದ್ಯಕ್ಕೆ ಇವುಗಳಿಂದ ವಿಮೋಚನೆ ಪಡೆಯುವ ಯಾವ ದಾರಿಯೂ ಕಾಣದಿರುವ ಸಂದರ್ಭಗಳಿಂದಾಗಿ ಪ್ರಗತಿಪರರು ಕಾಂಗ್ರೆಸ್ಸಿನ ಜೋಡೊ ಇವೆಲ್ಲಕ್ಕೂ ಪರಿಹಾರದ ದಾರಿ ಕಾಣಿಸಬಹುದು ಎಂಬ ಆಸೆಗಣ್ಣನ್ನು ಹೊಂದಿದ್ದಾರೆ.

ಆದ್ದರಿಂದ ಈ ಯಾತ್ರೆಯನ್ನು ಕೇವಲ ಕಾಂಗ್ರೆಸ್ಸಿನ ಚುನಾವಣಾ ಉದ್ದೇಶದ ಯಾತ್ರೆಯಾಗಿ ನೋಡಬಾರದೆಂದು ಬಯಸುತ್ತಾರೆ. ತಮ್ಮ ಬೆಂಬಲದ ಉದ್ದೆಶ ಕಾಂಗ್ರೆಸ್ಸಿನ ಚುನಾವಣಾ ಉದ್ದೇಶಗಳಿಗೂ ಮೀರಿದ ಸಂದರ್ಭದ ರಾಜಕೀಯ ಅನಿವಾರ್ಯತೆಯಾಗಿದೆಯೆಂದು ಪ್ರತಿಪಾದಿಸುತ್ತಿದ್ದಾರೆ.

ಹೀಗಾಗಿ ಈ ಯಾತ್ರೆಯ ಬಗ್ಗೆ ಯಾವುದೇ ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಕಾಂಗ್ರೆಸ್ಸಿಗರಿಗಿಂತ ಇವರೇ ಹೆಚ್ಚಾಗಿ ಖಂಡಿಸುತ್ತಿದ್ದಾರೆ. ಕೆಲವರಂತೂ ಜೋಡೊ ವನ್ನು ಬೆಂಬಲಿಸುತ್ತಾ ಬಂಬಲಿಸುತ್ತಾ 70 ರ ದಶಕದಲ್ಲಿ ಅಮಾಯಕ ಜನರು ಇಂದಿರಾಗಾಂಧಿಯನ್ನು ಹೇಗೆ ಆರಾಧಿಸುತ್ತಿದ್ದರೋ ಆ ರೀತಿ ರಾಹುಲ್ ಗಾಂಧಿಯನ್ನು ಆರಾಧಿಸಲು ತೊಡಗಿದ್ದಾರೆ. ಆತನ ಹಾವ, ಭಾವ, ನಗು ..ಪ್ರತಿಯೊಂದರಲ್ಲೂ ದೇಶದ ಭವಿಷ್ಯವನ್ನು ಕಾಣತೊಡಗಿದ್ದಾರೆ. ಇನ್ನು ಕೆಲವು ಬುದ್ಧಿಜೀವಿಗಳು ಜೋಡೊವನ್ನು ಬೆಂಬಲಿಸುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ಸಿನ ಎಲ್ಲಾ ಮಾರಕ ಆರ್ಥಿಕ ನೀತಿಗಳನ್ನೂ, ಎಲ್ಲಾ ಪ್ರಮಾದಗಳನ್ನು ಬೆಂಬಲಿಸಲು ಪ್ರಾರಂಭಿಸಿದ್ದಾರೆ. ಆ ಪ್ರಕ್ರಿಯೆಯಲ್ಲಿ ಇತಿಹಾಸವನ್ನೂ ಸಹ ಕಾಂಗ್ರೆಸ್ಸಿನ ವಿರುದ್ಧ ಬಿಜೆಪಿಯ ಸಂಚೆಂದು ನೋಡಲು ಪ್ರಾರಂಭಿಸಿದ್ದಾರೆ.

ಹೀಗಾಗಿ ಯೋಗೇಂದ್ರ ಯಾದವ್ ರೀತಿಯ ಬುದ್ಧಿಜೀವಿಗಳು ಹೇಳುತ್ತಿರುವಂತೆ, ” ಭಾರತ ಜೋಡೊ ದೇಶವನ್ನು ಉಳಿಸುವ ಗಳಿಗೆ ಇದು. ಈಗಿಲ್ಲವೆಂದರೆ ಇನ್ಯಾವಾಗ? ಇದು ಕೇವಲ ಕಾಂಗ್ರೆಸ್ಸಿನ ಕಾರ್ಯಕ್ರಮವಲ್ಲ” ಎಂಬ ಸಮರ್ಥನೆಗಳು ವಾಸ್ತವಕ್ಕೆ ವಿರುದ್ಧವಾಗಿರುವ ಮತ್ತು ಭವಿಷ್ಯದಲ್ಲೂ ಅಪಾಯಕಾರಿಯಾಗುವ ಸೂಚನೆಗಳನ್ನು ನೀಡುತ್ತಿದೆ.

ಏಕೆಂದರೆ ಸ್ವಾತಂತ್ರ್ಯಾ ನಂತರದಲ್ಲಿ ಕಾಂಗ್ರೆಸ್ಸಿನ ಅಧಿಕಾರಾವಧಿಯಲ್ಲೇ ಪ್ರಜೆಯು ತಂತ್ರದಿಂದ, ಗಣವು ರಾಜ್ಯದಿಂದ, ಧರ್ಮವು ನೈತಿಕತೆಯಿಂದ ದೂರವಾಗುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ಬಿಜೆಪಿ ಮತ್ತು ಸಂಘಪರಿವಾರ ಈ ವಿಭಜನೆಯನ್ನು ಹತ್ತು ಹಲವು ಆಯಾಮಗಳಿಗೆ ಇನ್ನಷ್ತು ವೇಗವಾಗಿ ಮತ್ತು ಉಗ್ರವಾಗಿ ಮತ್ತು ಆಳವಾಗಿ ವಿಸ್ತರಿಸಿದೆ. ಹೀಗಾಗಿ ಇವೆಲ್ಲವನ್ನೂ ಮತ್ತೆ ಜೋಡಿಸುವ ಕಾರ್ಯಕ್ರಮಗಳು ಕಾಂಗ್ರೆಸ್ ಈ ಜೋಡೊ ಯಾತ್ರೆಯವರೆಗೂ ಕಾಯಬೇಕಿರಲಿಲ್ಲ. ಅಥವಾ ಈ ಜೋಡೊ ಯಾತ್ರೆಯೊಂದಿಗೆ ಆ ಉದ್ದೇಶಗಳು ಈಡೇರುವುದೂ ಇಲ್ಲ. ಮುಗಿಯಲೂ ಬಾರದು.

ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಇಂಥಾ ಅಸಹಾಯಕ ಹಾಗೂ ಉತ್ಪ್ರೇಕ್ಷಿತ ಬೆಂಬಲಗಳು ಬಹಳಷ್ಟು ಬಾರಿ ಸಿನಿಕತನದಲ್ಲಿ ಪರ್ಯಾವಸನಗೊಂಡಿವೆ.

ಭಾರತ್ ಜೋಡೊ ವಿಶ್ಲೇಷಣೆಯ ಜನಪರ ಮಾನದಂಡಗಳೇನು?

ಆದ್ದರಿಂದ ಈ ಸಂದರ್ಭದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯನ್ನು ಹಾಗೂ ಅದರ ಇತಿ-ಮಿತಿಗಳನ್ನು ಬೆಂಬಲ ಹಾಗೂ ತಿರಸ್ಕಾರ ಗಳ ಬೈನರಿಗಳಾಚೆ ಇಟ್ಟು ವಿಶ್ಲೇಷಿಸಬೇಕಿದೆ. ಜೋಡೋ ಯಾತ್ರೆಯನ್ನು ಬೆಂಬಲಿಸಲು ಕಾಂಗ್ರೆಸ್ಸಿಗರು ಕೊಡುವ ಮಾನದಂಡಗಳನ್ನು ಹಾಗೂ ತಿರಸ್ಕರಿಸಲು ಸಂಘಿಗಳು ಒದಗಿಸುವ ಮಾನದಂಡಗಳೆರಡನ್ನೂ ಪಕ್ಕಕ್ಕಿಡಬೇಕಿದೆ.

ಇಂದು ದೇಶ ಎದುರಿಸುತ್ತಿರುವ ಬ್ರಾಹ್ಮಣವಾದಿ ಹಿಂದೂತ್ವ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿ ಫ಼್ಯಾಸಿಸಂ ಅನ್ನು ಸೋಲಿಸಲು ಅತ್ಯಗತ್ಯವಾಗಿರುವ ಪರ್ಯಾಯದ ಜನಸಮರಕ್ಕೆ ಈ ಭಾರತ್ ಜೋಡೊ ಎಷ್ಟು ಪೂರಕ ಅಥವಾ ಮಾರಕ ಎಂಬುದಷ್ಟೇ ಭಾರತ್ ಜೋಡೊವನ್ನು ವಿಶ್ಲೇಷಿಸುವ ಪ್ರಮುಖ ಮಾನದಂಡವಗಬೇಕಿದೆ.

ಹಾಗಿದ್ದಲ್ಲಿ ಕಾಂಗ್ರೆಸ್ಸಿನ ಭಾರತ್ ಜೋಡೋಗೆ ಶರತ್ತು ಬದ್ಧ ಬೆಂಬಲವೋ ಹಾಗೂ ಬೇಶರತ್ ಬೆಂಬಲವೋ ನೀಡುವುದರಿಂದ ಭಾರತದಲ್ಲಿ ಫ಼್ಯಾಸಿಸಂ ವಿರೋಧಿ ಜನಸಮರ ಗಟ್ಟಿಗೊಳ್ಳುವುದೇ?

ಮೊದಲನೆಯದಾಗಿ ಈ ಶರತ್ತುಬದ್ಧ ಬೆಂಬಲ ಮತ್ತು ಬೇಶರತ್ ಬೆಂಬಲದ ನಡುವೆ ಹೆಚ್ಚಿನ ಮತ್ತು ಮೌಲಿಕ ವ್ಯತ್ಯಾಸವಿಲ್ಲ. ಬೇಶರತ್ ಬೆಂಬಲಿಗರು ಕಾಂಗ್ರೆಸ್ ಕೊಡುವ ಭರವಸೆಗಳನ್ನೆಲ್ಲಾ ಪಾಲಿಸುತ್ತಲೇ ಬಂದಿದೆ ಎಂದು ನಂಬಲು ಬಯಸುತ್ತಾರೆ. ಶರತ್ತು ಬದ್ಧ ಬೆಂಬಲಿಗರು ಈ ಹಿಂದೆ ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲವಾದರೂ ಮುಂದೆ ಅದು ಈಡೇರಿಸಬಹುದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕಬಯಸುತ್ತಾರೆ.

ಹೀಗಾಗಿ ಅವೆರಡನ್ನು ಹೊರತುಪಡಿಸಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಇವಾಗಿವೆ-

ದೇಶ ಎದುರಿಸುತ್ತಿರುವ ಇಂದಿನ ಫ಼್ಯಾಸಿಸ್ಟ್ ಅಪಾಯದ ಸ್ವರೂಪವೇನು? ಫ಼್ಯಾಸಿಸ್ಟರು ಸಮಾಜದಲ್ಲಿ ಬಲಗೊಳ್ಳಲು ಮತ್ತು ಅಧಿಕಾರ ಹಿಡಿಯಲು ಕಾಂಗ್ರೆಸ್ಸಿನ ರಾಜಕೀಯ ಸಿದ್ಧಾಂತದ ಮತ್ತು ವರ್ಗ ಹಿತಾಸಕ್ತಿಯ ಕೊಡುಗೆ ಎಷ್ಟು? ಇಂದು ಅದು ಬದಲಾಗಿದೆಯೇ? ಇತಿಹಾಸದಲ್ಲಿ ಅದು ಶರತ್ತುಗಳಿಗೆ ದ್ರೋಹ ಬಗೆದದ್ದು ಕೇವಲ ಅಧಿಕಾರದ ಕಾರಣಕ್ಕಾಗಿಯೊ ಅಥವಾ ಕಾಂಗ್ರೆಸ್ಸಿನ ರಾಜಕೀಯ-ಸಾಮಾಜಿಕ-ಆರ್ಥಿಕ ನೀತಿಗಳಲ್ಲೇ ಫ಼್ಯಾಸಿಸಮ್ಮಿನ ಬೇರುಗಳಿವೆಯೋ? ಫ಼್ಯಾಸಿಸಂ ಅನ್ನು ಚುನಾವಣೆಯ ಮೂಲಕ ಸೋಲಿಸಲು ಸಾಧ್ಯವೇ?

ಸಂಘಪರಿವಾರ-ಬ್ರಾಹ್ಮಣವಾದ, ಬಂಡವಾಳವಾದ ಅತ್ಯುಗ್ರ ಸರ್ವಾಧಿಕಾರ

ಅಂಬೇಡ್ಕರ್ ಹೇಳುವಂತೆ ಈ ದೇಶದ ಪ್ರಧಾನ ಶತ್ರುಗಳು ಬ್ರಾಹ್ಮಣವಾದ ಮತ್ತು ಬಂಡವಾಳವಾದ.
ಭಾರತಕ್ಕೆ ಇಂದು ಎದುರಾಗಿರುವ ಫ಼್ಯಾಸಿಸಂ ಬಂಡವಾಳವಾದ ಮತ್ತು ಬ್ರಾಹ್ಮಣಶಾಹಿಯ ಅತಿ ನಗ್ನ, ಅತ್ಯುಗ್ರ ಬಹಿರಂಗ ಸರ್ವಾಧಿಕಾರ.

ಅದರ ಅತಿ ಆಕ್ರಮಣಕಾರಿ ಸ್ವರೂಪ ಬಿಜೆಪಿಯಾದರೂ, ಇತರ ಎಲ್ಲಾ ಪಕ್ಷಗಳೂ ಸಹ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಯನ್ನು ಪೋಶಿಸಿವೆ ಮತ್ತು ಪೋಷಿಸಲ್ಪಟ್ಟಿವೆ. ಸ್ವಾತಂತ್ರ್ಯನಂತರದಲ್ಲೂ ಪಕ್ಷಾತೀತವಾಗಿ ಪಡೆದ ಪೋಷಣೆಯಿಂದಾಗಿ ಈ ಬ್ರಾಹ್ಮಣೀಯ ಫ಼್ಯಾಸಿಸಂ ಎಲ್ಲಾ ಜಾತಿ-ಸಮುದಾಯಗಳಲ್ಲೂ ಬೇರುಬಿಟ್ಟುಕೊಂಡಿವೆ.

ನವ ವರ್ಣಾಶ್ರಮ ಚೌಕಟ್ಟಿನಲ್ಲಿ ಅದರ ಮೇಲ್ ಸ್ಥರಗಳನ್ನು ಅಲ್ಲಲ್ಲಿ ಒಳಗೊಳ್ಳೂತ್ತಾ ಸುಭದ್ರ ಸಾಮಾಜಿಕ ನೆಲೆಯನ್ನು ಪಡೆದುಕೊಂಡಿದೆ. ಬದಲಾದ ಸನ್ನಿವೆಶಕ್ಕೆ ತಕ್ಕಂತೆ ಈ ಬ್ರಾಹ್ಮಣ್ಯವನ್ನು ಹಿಂದೂತ್ವ ಮತ್ತು ಹಿಂದೂ ರಾಶ್ಟ್ರದ ಅಜೆಂಡಗಳಲ್ಲಿ ಪ್ಯಾಕೇಜು ಮಾಡಿ ಇತರ ಧರ್ಮೀಯರನ್ನು ಅನ್ಯಗೊಳಿಸಿ, ಶೋಷಿತ ಜಾತಿಗಳನ್ನು ಅಧೀನಗೊಳಿಸಿಕೊಳ್ಳುವ ಸಾಮಾಜಿಕ ಇಂಜಿನಿಯರಿಂಗ್ ನಡೆಸಿದೆ.

ಮತ್ತೊಂದೆಡೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳನ್ನು ಒಳಗೊಂಡಂತೆ ಎಲ್ಲಾ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಸೈದ್ಧಾಂತಿಕವಾಗಿ ಹಿಂದುವೀಕರಿಸಿದೆ. ಒಂದು ಹಿಂದುತ್ವವಾದಿ ಡೀಪ್ ಸ್ಟೇಟ್ ಸರ್ಕಾರ ನಡೆಸಿದೆ. ದ್ವೇಷಾಧಾರಿತ ಹಿಂದೂತ್ವವಾದಿ ಹಿಂದೂ ಸಮಾಜವೊಂದು *ಹಿಂದೂ ಓಟ್ ಬ್ಯಾಂಕ್ * ಅಗಿ ಸೃಷ್ಟಿಯಾಗಿದೆ. (ಇದು ಕೇವಲ ಶೇ. 36 ರಷ್ಟು ಮಾತ್ರ. ಉಳಿದ ಶೇ. 64 ಜನ ಅವರ ಜೊತೆ ಇಲ್ಲ ಎಂಬುದೆಲ್ಲಾ ಕಾಲಯಾಪನೆಯ ಚರ್ಚೆಗಳು. ಏಕೆಂದರೆ ಈ ಹಿಂದೂತ್ವವಾದಿ ಓಟ್ ಬ್ಯಾಂಕು 1984ರಲ್ಲಿ ಕೇವಲ ಶೇ.7 ರಷ್ಟಿತ್ತು. ಆದರೆ ಅ ನಂತರ ಪ್ರತಿ ಚುನಾವಣೆಯಲ್ಲಿ ಹೆಚ್ಚಾಗುತ್ತಾ ಬಂದಿದೆ. ಕರ್ನಾಟಕವನ್ನೂ ಒಳಗೊಂಡಂತೆ ದೇಶದ 10 ದೊಡ್ಡ ರಾಜ್ಯಗಳಲ್ಲಿ ಈಗಾಗಲೇ ಅದು ಶೇ. 50-60ನ್ನು ಮುಟ್ಟಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯು ಮೊದಲಿಗಿಂತ ಕಡಿಮೆ ಓಟುಗಳನ್ನು ಪಡೆದ ಕೇವಲ ಎರಡೇ ರಾಜ್ಯಗಳಾಗಿದ್ದ ಪಂಜಾಬ್ ಮತ್ತು ತಮಿಳುನಾಡುಗಳಲ್ಲೂ ಈ ಬಾರಿಯ ವಿಧಾನಸಭಾ ಚುನಾವಣೆಗಳಲ್ಲಿ ಅದರ ಓಟು ಶೇರು ಹೆಚ್ಚಾಗಿದೆ.)

ಈ ಹಿಂದೂ ಸಮಾಜ ಪ್ರತಿ ಚುನಾವಣೆಯಲ್ಲೂ ಹಿಂದೂತ್ವವಾದಿ ಅಜೆಂಡಾಗಳಿಗೆ ಓಟುಹಾಕುತ್ತದೆ. ಹೀಗಾಗಿ ಎಲ್ಲಿಯ ತನಕ ಈ ದೇಶದಲ್ಲಿ ಮತದಾರ, ವಿಶೇಷವಾಗಿ ಬಹುಸಂಖ್ಯಾತ ಸವರ್ಣೀಯ ಹಿಂದು ಸಮಾಜ ಪ್ರಜಾತಂತ್ರೀಕರಣಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ದೇಶದಲ್ಲಿ ಚುನಾವಣೆಗಳು ಫ಼್ಯಾಸಿಸಂ ಅನ್ನು ನವೀಕರಿಸುವ ಸಾಧನಗಳಾಗಿರುತ್ತವೆ.

ಆದ್ದರಿಂದಲೇ ಈ ಮಧ್ಯೆ ಭಾರತೀಯ ಫ಼್ಯಾಸಿಸ್ಟರು ಸಂವಿಧಾನ ಬದಲಾವಣೆಯ ಮಾತುಗಳನ್ನೂ ಆಡದೆ ಚುನಾವಣೆಯನ್ನು ತಮ್ಮ ಫ಼್ಯಾಸಿಸ್ಟ್ ಸರ್ವಾಧಿಕಾರಕ್ಕೆ ಪ್ರಜಾತಂತ್ರದ ಮುಖವಾಡ ಹೊದಿಸುವ ಸಾಧನವನ್ನಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ.

ವಿರೋಧ ಪಕ್ಷಗಳನ್ನು ಆಳುವ ಹಿಂದೂತ್ವ ಹೆಜಿಮೊನಿ
ಒಂದೊಮ್ಮೆ ಇತರ ಕಾರಣಗಳಿಂದ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕೆ ಬಂದರೂ ಅಥವಾ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದಾಗಲೂ, ಈ ಹಿಂದೂತ್ವವಾದಿ ಅಜೆಂಡಾಗಳನ್ನೇ ಅನುಸರಿಸುವಷ್ಟು ಅಥವಾ ರದ್ದು ಮಾಡದೇ ಮುಂದುವರೆಸುವಷ್ಟು ಯಾಜಮಾನ್ಯವನ್ನು (ಹೆಜಿಮೊನಿ) ಹಿಂದೂತ್ವ ರಾಜಕಾರಣ ಹೊಂದಿದೆ.

ಇತಿಹಾಸದ ಕೆಲವು ಉದಾಹರಣೆಗಳನ್ನಿಲ್ಲಿ ಗಮನಿಸಬಹುದು:
ಸ್ವಾತಂತ್ರ್ಯ ಪೂರ್ವದಲ್ಲಿ (ತಿಲಕ್, ಮಾಳವೀಯ ) ಮತ್ತು ನಂತರದಲ್ಲಿ (ಪಟೇಲ್, ಮುನ್ಷಿ) ಅತ್ಯುಗ್ರ ಹಿಂದೂತ್ವವಾದಿಗಳು ಕಾಂಗ್ರೆಸ್ ಮತ್ತು ಆ ನಂತರದ ಜನತಾ ಪಾರ್ಟಿಯ (ಮುರಾರ್ಜಿ ದೇಸಾಯಿ, ಗುಲ್ಜಾರಿ ನಂದಾ)ಅತ್ಯುನ್ನತ ಸ್ಥಾನದಲ್ಲಿ ಮುಂದುವರೆದದ್ದು, ತುರ್ತುಸ್ಥಿತಿಯಲ್ಲಿ ಇಂದಿರಾ ಗಾಂಧಿ ತೋರಿದ ಅಪಾರ ಮುಸ್ಲಿಂ ದ್ವೇಷ, ೧೯೮೦ರ ನಂತರ ಇಂದಿರಾ ಸರ್ಕಾರ ಅಳವಡಿಸಿಕೊಂಡ ” ಹಿಂದೂ ಆತಂಕದಲ್ಲಿದ್ದಾನೆ-ದೇಶದ ಆತಂಕದಲ್ಲಿದೆ” ಎಂಬ ಹಿಂದೂತ್ವ ನೀತಿ, ಹಿಂದೂ ಏಕಾತ್ಮಕ ಯಾತ್ರೆ, ರಾಜೀವ್ ಗಾಂಧಿ ಕಾಲದಲ್ಲಿ ಬಾಬ್ರಿ ಮಸೀದಿ ಬೀಗ ತೆಗೆದು ಬಿಜೆಪಿಯ ಹಿಂದೂ ಕೋಮುವಾದಕ್ಕೆ ಇಂಬಾಗಿದ್ದು, 1992ರಲ್ಲಿ ಬಾಬ್ರಿ ಮಸೀದಿ ನಾಶಕ್ಕೆ ಮೌನ ಸಮ್ಮತಿ ನೀಡಿದ್ದು, ಯುಪಿಎ ಕಾಲದಲ್ಲಿ ಕಮ್ಯುನಿಸ್ಟರ ಬೆಂಬಲದೊಂದಿಗೆಯೇ ಬಿಜೆಪಿಯ ಇಂದಿನ ಧರ್ಮಾಧಾರಿತ ನಾಗರಿಕತ್ವಕ್ಕೆ ತಾತ್ವಿಕ ಅಡಿಪಾಯ ಕೊಡುವಂತೆ ವೀಸಾ ನಿಯಮಗಳನ್ನು ಬದಲಿಸಿದ್ದು, ತೀರಾ ಇತ್ತಿಚೆಗೆ 2020ರ ಆಗಸ್ಟ್ 5 ರಂದು ಬಾಬ್ರಿ ಮಸೀದಿ ಕಡವಿದ ಜಾಗದಲ್ಲಿ ರಾಮಮಂದಿರ ನಿರ್ಮಾಣ ಪ್ರರಂಭವಾದಾಗ ಪ್ರಿಯಾಂಕಾ ನೇತೃತ್ವದಲ್ಲಿ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಾ ಮಂದಿರ ನಿರ್ಮಾಣದ ಹಿರಿಮೆ ತಮಗೆ ಸಲ್ಲಬೇಕೆಂದು ಪೈಪೋಟಿಗಿಳಿದ್ದು..ಕಾಂಗ್ರೆಸ್ಸಿನ ಮೇಲಿರುವ ಹಿಂದೂತ್ವ ರಾಜಕಾರಣದ ಯಾಜಮಾನ್ಯವನ್ನು ಸೂಚಿಸುತ್ತದೆ.

ಇತರ ವಿರೋಧ ಪಕ್ಷಗಳ ಕಥೆಯೂ ತುಂಬಾ ಭಿನ್ನವೇನಲ್ಲ:

ಬಾಬ್ರಿ ಮಸೀದಿ ನಾಶದ ನಂತರವೂ ಡಿಎಂಕೆ ಎನ್‌ಡಿಎ ಭಾಗವಾದದ್ದು, ಗುಜರಾತ್ ಗಲಭೆಯ ನಂತರವೂ ಬಿಎಸ್ಪಿ ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಮೋದಿ ಪರವಾಗಿ ಪ್ರಚಾರ ಮಾಡಿದ್ದು.. ಆಪ್, ಬಿಎಸ್ಪಿ, ಎಸ್ಪಿ ಎಲ್ಲಾ ಪಕ್ಷಗಳೂ ಉತ್ತರ ಪ್ರದೇಶದ ಚುನಾವಣಾ ಪ್ರಚಾರವನ್ನು ಅಯೋಧ್ಯೆಯಿಂದಲೇ ಪ್ರಾರಂಭಿಸಿ ತಾವು ಅಧಿಕಾರಕ್ಕೆ ಬಂದರೆ ಬಿಜೆಪಿಗಿಂತ ಮುಂಚೆ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡುತ್ತೇವೆಂಬ ಭರವಸೆ ನೀಡಿದ್ದು, ಆಪ್ ಪಕ್ಷವಾದರೆ ಈ ಪೈಪೋಟಿಯಲ್ಲಿ ಬಿಜೆಪಿ ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ದೆಹಲಿಯಲ್ಲಿ ಎಲ್ಲಾ ಮಂದಿರಗಳಲ್ಲಿ ಸರ್ಕಾರದಿಂದಲೇ ಹನುಮಾನ್ ಚಾಲೀಸ್ ಪಠಣವನ್ನು ಆಯೋಜಿಸುತ್ತಿರುವುದೂ, ಜೆಡಿಯು, ಬಿಎಸ್ಪಿ ಯಂಥ ಪಕ್ಷಗಳೇ ರಾಜ್ಯ ಸಭೆಯಲ್ಲಿ ಸಿಎಎ, ಆರ್ಟಿಕಲ್ 370 ರದ್ದು, UAPA ತಿದ್ದುಪಡಿ, ತ್ರಿಪಲ್ ತಲಾಖ್ ಇನ್ನಿತರ ಬಿಜೆಪಿಯ ಹಿಂದೂತ್ವವಾದಿ ಮಸೊದೆಗಳಿಗೆ ಬೆಂಬಲ ಕೊಟ್ಟು ಶಾಸನವಾಗಿಸಿದ್ದು-

ಇವೆಲ್ಲಾ ಸಂಘಪರಿವಾರದ ಫ಼್ಯಾಸಿಸ್ಟ್ ಅಪರಾಧಗಳಿಗೆ ಇತರ ಪಕ್ಷಗಳು ಹೇಗೆ ಸಹಾಪರಾಧಿಗಳಿವೆ ಎಂದು ಸಾಬೀತು ಪಡಿಸುವ ಚಾರ್ಜ್ ಶೀಟ್ ಮಾತ್ರವೇ? ಅಥವಾ ಇದು ಹಿಂದೂತ್ವದ ಯಾಜಮಾನ್ಯ ಹೇಗೆ ಇಡೀ ಸಂಸದೀಯ ವ್ಯವಸ್ಥೆಯನ್ನು ಆವರಿಸಿಕೊಂಡಿದೆ ಎಂಬುದನ್ನು ಹಾಗೂ ಹೇಗೆ ಅವು ಫ಼್ಯಾಸಿಸಂ ಅನ್ನು ಸೋಲಿಸುವುದಿರಲಿ ಅದರ ವಿರುದ್ಧ ಗುಣಾತ್ಮಕ ಪ್ರತಿರೋಧವನ್ನೂ ತೋರಲಾರವು ಎಂಬುದನ್ನು ಸಾಬೀತುಪಡಿಸುವ ಇತಿಹಾಸದ ಗುಣಪಾಠಗಳೇ?

ಫ಼್ಯಾಸಿಸಂ ವಿರೋಧಿ ಶರತ್ತುಗಳು ಮತ್ತು ಕಾಂಗ್ರೆಸ್ಸು

ಹಾಗೆಯೇ ಶರತ್ತು ಬದ್ಧ ಬೆಂಬಲವಾದಿಗಳು ಇಲ್ಲಿ ಗಮನಿಸಬೇಕಾದ ಇತಿಹಾಸದ ಇನ್ನೂ ಕೆಲವು ಮುಖ್ಯ ಸಂಗತಿಗಳಿವೆ:

ಅ)1969ರ ನಂತರದ ಇಂದಿರಾಗಾಂಧಿಯವರ ಘೋಷಣೆಗಳು ಮತ್ತು ಅವರ ಜನ ಸಂಪರ್ಕಗಳು ಇಂದು ರಾಹುಲ್ ಗಾಂಧಿಯವರು ಮಾಡುತ್ತಿರುವುದಕ್ಕಿಂತ ಪ್ರಮಾಣ ಹಾಗೂ ಗುಣದಲ್ಲಿ ಹತ್ತಾರುಪಟ್ಟು ತೀವ್ರವಾಗಿತ್ತು. ಹೀಗಾಗಿಯೇ ಆಗ ಸಿಪಿಐ ಪಕ್ಷದ ನೇತಾರರರಾಗಿದ್ದ ಕುಮಾರ್ ಮಂಗಳಂ ಅವರು ಈಗ ಸಿಪಿಐ ಅನ್ನು ಕಾಂಗ್ರೆಸ್ಸಿನೊಳಗೆ ವಿಲೀನಗೊಳಿಸಿ ಒಳಗಿಂದ ಕಾಂಗ್ರೆಸ್ಸನ್ನು ಕ್ರಾಂತಿಕಾರಿಯಾಗಿಸುವ ಕಾಲ ಎಂದು ಘೋಷಿಸಿ ಕಾಂಗ್ರೆಸ್ ಸೇರಿಕೊಂಡು ಮಂತ್ರಿಯಾಗಿದ್ದರು. ಸಿಪಿಐ ಅಂತೂ ತುರ್ತುಸ್ಥಿತಿಯನ್ನೂ ಶರತ್ತು ಬದ್ಧವಾಗಿ ಬೆಂಬಲಿಸಿತ್ತು. ಆದರೆ ಇಂದಿರಾ ಕಾಂಗ್ರೆಸ್ ಸಮಾಜವಾದಿ ನೀತಿಯನ್ನು ಜಾರಿಗೆ ತರುವುದಿರಲಿ ತುರ್ತುಸ್ಥಿತಿಯನ್ನು ಬಳಸಿಕೊಂಡು ಅಂದಿನ ದೊಡ್ದ ಬಂಡವಾಳಶಾಹಿ ಟಾಟಾ, ದೊಡ್ಡ ಬಂಡವಾಳಶಾಹಿಗಳ ಪರವಾಗಿ ಮುಂದಿಟ್ಟ ಟಾಟಾ ಮೆಮೊರಾಂಡಮ್ ಅನ್ನು ಸಂಪೂರ್ಣವಾಗಿ ಜಾರಿಗೆ ತಂದಿತು. ಮುಸ್ಲಿಮರ ಮೇಲೆ ಇನ್ನಿಲದ ದೌರ್ಜನ್ಯವನ್ನು ನಡೆಸಿತು.

ಅ) 2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದದ್ದೇ ಕಮ್ಯುನಿಸ್ಟರು ಹಾಗೂ ಇತರರು ವಿಧಿಸಿದ ಕಾಮನ್ ಮಿನಿಮಮ್ ಪ್ರೋಗ್ರಾಂ ನ ಶರತ್ತುಗಳಿಗೆ ಬದ್ಧವಾಗಿರುವ ಭರವಸೆಯ ಮೇಲೆ. ಆದರೆ ಅದೇ ಕಾಲಾವಧಿಯಲ್ಲೇ ಆ ಶರತ್ತುಗಳೆಲ್ಲ ಮೀರಿ ಧರ್ಮಾಧಾರಿತ ನಾಗರಿಕತ್ವ ನೀತಿಗೆ ಭೂಮಿಕೆ ಒದಗಿಸಿಕೊಟ್ಟ ವೀಸಾ ನೀತಿ, ಆಂಶಿಕವಾಗಿ NPR ಜಾರಿ, ಮೋದಿ ಜಾರಿಗೆ ತಂದು ಹಿಂತೆಗೆದುಕೊಂಡ ಕೃಷಿ, ವಿದ್ಯುತ್ ನೀತಿಗಳೆಲ್ಲಾ ಜಾರಿಯಾದವು.

ಈಗ ವಿರೋಧ ಪಕ್ಷದಲ್ಲಿದ್ದರೂ ಎಲ್ಲಾ ಪಕ್ಷಗಳು ಸರ್ವ ಸಮ್ಮತಿಯಿಂದ ಬ್ರಾಹ್ಮಣವಾದಿ EWS ಮೀಸಲಾತಿಗೆ ಬಂಬಲ ಸೂಚಿಸಿವೆ. ಮತ್ತು ಯಾವ ಪಕ್ಷಗಳೂ ಸಹ ತರಗತಿಯಲ್ಲಿ ಭಗವದ್ಗೀತೆ ಬೋಧನೆ, ಹಿಜಾಬ್, ರಾಮಮಂದಿರ ನಿರ್ಮಾಣಗಳಂಥ ಹಿಂದೂತ್ವವಾದಿ ದ್ವೇಷಾಧಾರಿತ ನೀತಿಗಳ ವಿರುದ್ಧ ಬಹಿರಂಗ ವಿರೋಧ ವ್ಯಕ್ತಪಡಿಸಿ ಪರ್ಯಾಯ ರಾಜಕೀಯವನ್ನು ಮುಂದಿಡಲು ಸಿದ್ಧವಿಲ್ಲ. ಇವೆಲ್ಲವೂ ಶರತ್ತು ಬದ್ದ ಬೆಂಬಲವೆಂಬುದಕ್ಕೆ ಯಾವ ಅರ್ಥವೂ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.

ಹೀಗಾಗಿ ಯಾವ ಪರಿಣಾಮಾತ್ಮಕ ವಿರೋಧವೂ ಇಲ್ಲದ ಸನ್ನಿವೇಶದಲ್ಲಿ ಜನಬಲ ಮತ್ತು ರಾಜ್ಯಬಲವನ್ನು ಬಳಸಿಕೊಂಡು ಭಾರತೀಯ ಫ಼್ಯಾಸಿಸ್ಟರು ಕಾರ್ಪೊರೇಟ್ ಬಂಡವಾಳದ ಸೇವೆಯನ್ನು ಅಭಿವೃದ್ಧಿಯ ಹೆಸರಲ್ಲೇ ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದ್ದಾರೆ. ಈ ಕಾರ್ಪೊರೇಟ್ ಬಂಡವಾಳ ಪರ ನೀತಿಗಳೆಲ್ಲವನ್ನೊ ಕಾಂಗ್ರೆಸ್ ನೇತೃತ್ವದ ಎಲ್ಲಾ ವಿರೋಧ ಪಕ್ಷಗಳು ಪೈಪೋಟಿಯಲ್ಲಿ ಜಾರಿ ಮಾಡುತ್ತಿದ್ದವು ಎಂಬುದನ್ನು ನೆನಪಿಸಿಕೊಂಡಾಗ ಫ಼್ಯಾಸಿಸಂನ ಆರ್ಥಿಕ ನೀತಿಗಳಿಗೂ ಸಂಸದೀಯ ವಿರೋಧ ಇಲ್ಲವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗೂ ಹಿಂದೂತ್ವದ ಸಾಮಾಜಿಕ -ಸಾಂಸ್ಕೃತಿಕ ನೀತಿಗಳ ಬಗ್ಗೆಯೂ ಸಂಸದೀಯ ವ್ಯವಸ್ಥೆಯಲ್ಲಿ ಒಂದು ಬಗೆಯ ಸಮ್ಮತಿ ಸೃಷ್ಟಿಯಾಗಿದೆ.

ಇದು ಈ ದೇಶದ ಇಂದಿನ ಫ಼್ಯಾಸಿಸಂ ನ ವಿಶ್ವರೂಪ. ಬ್ರಾಹ್ಮಣವಾದ ಮತ್ತು ಬಂಡವಾಳವಾದವನ್ನು ಬಿಜೆಪಿಗೆ ಮುನ್ನ ಕಾಂಗ್ರೆಸ್ಸನ್ನೂ ಒಳಗೊಂಡಂತೆ ಈ ದೇಶದ ಎಲ್ಲಾ ವಿರೋಧ ಪಕ್ಷಗಳು-ಕಾಂಗ್ರೆಸ್ ಮಾತ್ರವಲ್ಲ- ಆಪ್, ಅಧಿಕಾರದಲ್ಲಿದ್ದಾಗ ಕಮ್ಯುನಿಸ್ಟರು, ಬಿಎಸ್ಪಿ ಎಲ್ಲವೂ ಪೋಷಿಸಿಕೊಂಡು ಬಂದಿವೆ. ಸಂಘಪರಿವಾರದ ಇಂದಿನ ಫ಼್ಯಾಸಿಸಂ ಹಿಂದೆ ಅಧಿಕಾರದಲ್ಲಿದ್ದವರ ಮತ್ತು ಈ ವ್ಯವಸ್ಥೆಯ ಗುಪ್ತ ಹಾಗೂ ಬಹಿರಂಗ ಪೋಷಣೆಯ ಪರಿಣಾಮ.

ಮೃದು ಬ್ರಾಹ್ಮಣ್ಯದ ಮೂಲಕ ಉಗ್ರ ಬ್ರಾಹಣ್ಯದ ವಿರೋಧ?

ಆದ್ದರಿಂದ ಭಾರತ್ ಜೋಡೋ ಬಗ್ಗೆ ಉತ್ಪ್ರೇಕ್ಷಿತ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಮುನ್ನ ಇತಿಹಾಸದ ಇನ್ನೂ ಎರಡು ಪಾಠಗಳನ್ನು ಗಮನದಲ್ಲಿಟ್ಟೂ ಕೊಳ್ಳಬೇಕು:

ಮೊದಲನೆಯದಾಗಿ ಕಾಂಗ್ರೆಸ್ ಆದಿಯಾಗಿ ಬಹುಪಾಲು ಎಲ್ಲಾ ಪಕ್ಷಗಳು ಸಾರದಲ್ಲಿ ಬ್ರಾಹ್ಮಣವಾದಿ ಮತ್ತು ಬಂಡವಾಳವಾದಿ ಪಕ್ಷಗಳೇ ಆಗಿವೆ ಎಂಬುದನ್ನು ಕಳೆದ 75 ವರ್ಷಗಳ ಇತಿಹಾಸವನ್ನು ಕಣ್ಣುಬಿಟ್ಟು ನೋಡುತ್ತಿರುವವರಿಗೆ ವಿಶೇಷವಾಗಿ ಸಾಬೀತು ಮಡುವ ಅಗತ್ಯವಿಲ್ಲ. ಅಂಬೇಡ್ಕರ್ ಅವರೂ ಕೂಡ ಭಾರತೀಯ ಪ್ರಜಾತಂತ್ರದ ಪ್ರಧಾನ ಕೊರತೆ ಇಲ್ಲಿನ ಬಹುಸಂಖ್ಯಾತತೆ ಎನ್ನುವುದು ರಾಜಕೀಯ ಬಹುಸಂಖ್ಯಾತತೆ (Political Majority)ಯಾಗದೆ ಕೋಮುವಾರು ಬಹುಸಂಖ್ಯಾತತೆ (Communal Majority) ಆಗಿದೆ ಎಂದು ಹೇಳಿದ್ದು ಇದೇ ಅರ್ಥದಲ್ಲಿ.

ಆದ್ದರಿಂದ ಇಲ್ಲಿನ ಫ಼್ಯಾಸಿಸಂ ಗೆ ಭಾರತೀಯ ಸಮಾಜ ಒದಗಿಸಿರುವ ಸಾಂಸ್ಥಿಕ ಬೇರುಗಳನ್ನು ಕಡಿಯದೆ ಯಾವ ಪಕ್ಷವೂ ಫ಼್ಯಾಸಿಸಂ ಅನ್ನು ವಿರೋಧಿಸಲು ಸಾಧ್ಯವಿಲ್ಲ.

ಆದ್ದರಿಂದ ಈ ಬ್ರಾಹ್ಮಣೀಯ ಕಾರ್ಪೊರೇಟ್ ಫ಼್ಯಾಸಿಸಂ ಅನ್ನು ಸೋಲಿಸಲು ಒಂದು ನೈಜ ಬ್ರಾಹ್ಮಣವಾದ ವಿರೋಧಿ, ಬಂಡವಾಳಶಾಹಿ ವಿರೋಧಿ ಜನಸಮರದ ಅಗತ್ಯವಿದೆ.

ಕಳೆದ 75 ವರ್ಷಗಳ ಸಂಸದೀಯ ಇತಿಹಾಸವು ಮೃದು ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿ ಪಕ್ಷಗಳು ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತೆ ಮಾಡಿದ್ದರೂ ಅಂತಿಮವಾಗಿ ಹೇಗೆ ಮಾನ್ಯತೆಯನ್ನು ಕಳೆದುಕೊಂಡು ಅತ್ಯುಗ್ರ ಬ್ರಾಹ್ಮಣಶಾಹಿ-ಬಂಡವಾಳಶಾಹಿ ಫ಼್ಯಾಸಿಸ್ಟ್ ಆಳ್ವಿಕೆಗೆ ದಾರಿ ಮಾಡಿಕೊಟ್ಟವು ಎಂಬುದಕ್ಕೆ ಸಾಕ್ಷಿಯಗಿದೆ. ಭಾರತ್ ಜೋಡೊ ಕಾರ್ಯಕ್ರಮವು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದೇ ಬಿಟ್ಟರೂ ಅದರ ನೀತಿಗಳು ಸಮಾಜದಲ್ಲಿ ಆಳವಗಿ ಬೇರುಬಿಟ್ಟಿರುವ ಬ್ರಾಹ್ಮಣವಾದಿ ಮತ್ತು ಬಂಡವಾಳವಾದಿ ಮನೋಧರ್ಮವನ್ನು ಅರ್ಥಾತ್ ಹಿಂದೂತ್ವ ಅಜೆಂಡಗಳನ್ನು ಅಲುಗಾಡಿಸುವುದಿಲ್ಲ. ಅದು ಮತ್ತೆ ಇನ್ನಷ್ಟು ಉಗ್ರವಾದ ಫ಼್ಯಾಸಿ ಆಳ್ವಿಕೆಗೆ ದಾರಿ ಮಾಡಿಕೊಡುತ್ತದೆ.

ಜನಸಂಘಟನೆಯಿಲ್ಲದೆ ಜನರೊಳಗಿರುವ ಫ಼್ಯಾಸಿಸಂ ಸೋಲಿಸಲಾಗದು

ಎರಡನೆಯದಾಗಿ, ಭಾರತೀಯ ಫ಼್ಯಾಸಿಸ್ಟರು ಕಳೆದ ನೂರು ವರ್ಷಗಳಿಂದ ಜನರಲ್ಲಿ ಆಳವಾದ ಬೇರುಗಳನ್ನು ಬಿಡುತಾ ಇಂದು ಸಮಾಜದಲ್ಲಿ ಮತ್ತು ಆಡಳಿತದಲ್ಲಿ ಸರ್ವಾಧಿಕಾರಿಯಾಗುವಷ್ಟು ಬೆಳೆದಿದ್ದಾರೆ. ಮೊದಮೊದಲು ಅವರೂ ಕೂಡ ಅಲ್ಪಶಕ್ತಿಯನ್ನೇ ಹೊಂದಿದ್ದರೂ ನಿರಂತರತೆ, ಧೃಢತೆ ಹಾಗೂ ಕುತಂತ್ರೀ ಕಾರ್ಯತಂತ್ರಗಳ ಮೂಲಕ ಅವರು ಬೆಳೆದರು. ಉದಾಹರಣೆಗೆ 1990ರ ನಂತರದ ರಾಮರಥೆಯಾತ್ರೆಯ ಮೂಲಕ ಅವರು ಹಿಂದೂ ಸಮಾಜದಲ್ಲಿ ವಿಸ್ತೃತವಾಗಿ ಬೇರುಬಿಟ್ಟಿದ್ದು ಈಗ ಇತಿಹಾಸ.

ಇವತ್ತು ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೊ ಕೂಡಾ ಇದೇ ರೀತಿ ಕಾಂಗ್ರೆಸ್ಸಿನ ಬೆಳವಣಿಗೆಗೆ ಅನುಕೂಲ ಮಾಡಿಕೊಡಬಹುದೇ?

ಸಂಘಪರಿವಾರದ ರಾಮರಥ ಯಾತ್ರೆಯು ಹಾದುಹೋದ ನಂತರ ಅದರ ದ್ವೇಷ ಸಂದೇಶವನ್ನು ಪರಿವಾರದ ಸಂಘಟನೆಗಳು ಸ್ಥಳೀಯಕರಿಸಿದವು ಮತ್ತು ದುಪ್ಪಟ್ಟುಗೊಳಿಸಿದವು. ಅದಕೆ ಬೇಕಾದ ಸಂಘಟನೆಗಳನ್ನು ಅವರು ನಿರಂತರವಾಗಿ ಕಟ್ಟಿಕೊಳ್ಳುತ್ತಲೇ ಬಂದಿದ್ದರು. ರಥಯಾತ್ರೆಯನ್ನು ಬಳಸಿಕೊಂಡು ಅದು ಇನ್ನಷ್ಟು ಆಳವಾಯಿತು. ಅಗಲವಾಯಿತು.

ಉದಾಹರಣೆಗೆ 1991ರ ರಥಯಾತ್ರೆಯ ಭಾಗವಾಗಿಯೇ ವಿಶ್ವಹಿಂದೂ ಪರಿಶತ್ ಚಿಕ್ಕಮಗಳೂರಿನಲ್ಲಿ ಶಾರದಾ ಯಾತ್ರವನ್ನು ಆಯೋಜಿಸಿತು. ಅದಾದ ಮರುವರ್ಷದಿಂದಲೇ ಬಾಬಾಬುಡನ್ ದರ್ಗಾದಲ್ಲಿ ಹಿಂದೂ ರಿವಾಜುಗಳನ್ನು ಬಲವಂತವಾಗಿ ಹೇರುತ್ತಾ ದತ್ತಜಯಂತಿಯನ್ನು ಪ್ರಾರಂಭಿಸಿತು. ಆಡಳಿತರೂಢ ಕಾಂಗ್ರೆಸ್ ಪಕ್ಷ ಹಾಗೂ ಆ ನಂತರದ ಜೆಡಿಎಸ್ ಪಕ್ಷ ಅದನ್ನು ವಿರೋಧಿಸಿದರೆ ಹಿಂದೂ ಒಟ್ ಬ್ಯಾಂಕ್ ಕಳೆದುಕೊಳುತ್ತೇವೆಂಬ ಭೀತಿಯಲ್ಲಿ ಹಿಂದೂತ್ವವಾದಿ ಆಕ್ರಮಣಗಳನ್ನು ಕಾನೂನುಮಾನ್ಯಗೊಳಿಸುತ್ತಾ ಹೋದರು. ಅದರ ಒಟ್ಟುಪರಿಣಾಮ ಈಗ ಚಿಕ್ಕಮಗಳೂರು ಮಾತ್ರವಲ್ಲ ಸುತ್ತಮುತ್ತಲ ಜಿಲ್ಲೆಯಲ್ಲೂ ಬಿಜೆಪಿ ಸತತ ಗೆಲ್ಲುತ್ತಾ ಬಂದಿದೆ. ಮತ್ತು ಸಂಘಪರಿವಾರ ಹಿಂದೂ ಸಮಾಜದಲ್ಲಿ ವಿಸ್ತೃತವಾದ ಸಂಘಟನೆಯನ್ನು ಕಟ್ಟಿಕೊಂಡಿದೆ.

ಇದು ಫ಼್ಯಾಸಿಸ್ಟರು ಯಾತ್ರೆಗಳನ್ನು ಸಮಾಜದಲ್ಲಿ ನೆಲೆಯನ್ನು ಗಳಿಸಿಕೊಳ್ಳಲು ಹಾಗೂ ಒಟುಗಳಾಗಿಸಿಕೊಳ್ಳಲು ಅನುಸರಿಸಿದ ರೀತಿ.

ಆದರೆ ಭಾರತ ಜೋಡೊ ಯಾತ್ರೆಯನ್ನು ಸಮಾಜದ ನೆಲೆಯನ್ನಾಗಿ ಮಾಡಿಕೊಳ್ಳುವ ಅಜೆಂಡಾ ಆಗಲೀ, ಜನಸಂಘಟನೆಗಳಾಗಲೀ ಕಾಂಗ್ರೆಸ್ಸಿಗೆ ಇಲ್ಲ.

ಫ಼್ಯಾಸಿಸ್ಟರಿಗೆ ಪರ್ಯಾಯವಾದ ತೀವ್ರವಾದ ಜನಪರ ಅಜೆಂಡಾಗಳು ಮತ್ತು ಜನಸಂಘಟನೆಗಳು ಇಲ್ಲದೆ ಬಿಜೆಪಿಯನ್ನು ಚುನಾವಣೆಯಲ್ಲೂ ಸೋಲಿಸಲು ಸಾಧ್ಯವಿಲ್ಲ.ರಾಜಕೀಯದಲ್ಲಿ ಮತ್ತು ಸಮಾಜದಲ್ಲಿ ಫ಼್ಯಾಸಿಸಮ್ಮನ್ನು ಸೋಲಿಸಲಂತೂ ಸಾಧ್ಯವೇ ಇಲ್ಲ.

ಕಾಂಗ್ರೆಸ್ಸನ್ನೂ ಒಳಗೊಂಡಂತೆ ಎಲ್ಲಾ ಬಿಜೆಪಿಯೇತರ ಪಕ್ಷಗಳು ಆಳವಾದ ಮತ್ತು ವಿಸ್ತಾರವಾದ ಜನಬೆಂಬಲವನ್ನೇ ಹೊಂದಿಲ್ಲ.

ಚುನಾವಣೆಗೆ ಸೀಮಿತವಾದ ವಿರೋಧದಿಂದ ಸುಸ್ಥಿರವಾಗುತ್ತಿರುವ ಫ಼್ಯಾಸಿಸಂ!

ಫ಼್ಯಾಸಿಸಂ ಸೋಲಬೇಕಿರುವುದು ಸಮಜದಲ್ಲಿ, ಜನರ ತಲೆಯಲ್ಲಿ. ಎಲ್ಲಿಯತನಕ ಬಹುಸಂಖ್ಯಾತ ಹಿಂದೂ ಸಮಾಜಕ್ಕೆ ಸಂಘಪರಿವಾರ ಹೇಳುವ ಹಿಂದೂ ಆತಂಕದಲ್ಲಿದ್ದಾನೆ, ದೇಶ ಆತಂಕದಲ್ಲಿದೆ, ಬಲಿಷ್ತವಾದ ಜನನಾಯಕನ ಸರ್ವಾಧಿಕಾರದಿಂದ ಮಾತ್ರ ಹಿಂದೂಗಳ ಶತ್ರುಗಳನ್ನು ಸೋಲಿಸಲು ಸಾಧ್ಯ ಎಂಬ ರಾಜಕೀಯ ಸರಿ ಎಂಬ ಭಾವನೆ ಇರುತ್ತದೋ ಅಲ್ಲಿಯವರೆಗೆ ಬಿಜೆಪಿಯ ವಿರೋಧವನ್ನೆಲ್ಲಾ ದೇಶ ವಿರೋಧ ಮತ್ತು ಹಿಂದೂ ವಿರೋಧ ಎಂದೇ ಸಮೀಕರಿಸುವಲ್ಲಿ ಯಶಸ್ವಿಯಾಗುತ್ತಾ ಹೋಗುತ್ತಾರೆ. ಚುನಾವಣೆಯಲ್ಲಿ ಗೆಲ್ಲುತ್ತಾ ಹೋಗುತ್ತಾರೆ. 2019ರಲ್ಲಿ ಕರ್ನಾಟಕದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಸೆಕ್ಯುಲಾರ್ ಓಟುಗಳು ಒಡೆಯಬಾರದೆಂದು ನಡೆಸಿದ ಜಂತಿ ಸ್ಪರ್ಧೆಯ ಪ್ರಯೋಗವು ಬಿಜೆಪಿಯ ಓಟು ಶೇರುಗಳನ್ನು ಹೆಚ್ಚಿಸಿದ್ದು ಇದೇ ಕಾರಣಕ್ಕೆ.

ಹೀಗಾಗಿ ಇಂದಿನ ಸಂದರ್ಭದ ವಿಪರ್ಯಾಸವೆಂದರೆ ಆಳವಾದ ಮತ್ತು ವಿಸ್ತಾರವಾದ ಜನಬೆಂಬಲವನ್ನು ಕಟ್ಟಿಕೊಳ್ಳದ ಪಕ್ಷಗಳು ಮತ್ತು ಸಂಘಟನೆಗಳು ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ವಿರುದ್ಧನಡೆಸುವ ತಂತ್ರಗಳು ಉಲ್ಟಾ ಅದಕ್ಕೆ ಉಪಕಾರಿಯಾಗಿ ಪರಿಣಮಿಸುತ್ತಿರುವುದು. ಹೀಗಾಗಿ ಎಲ್ಲಿಯ ತನಕ ಈ ದೇಶದ ಮತದಾರರನ್ನು ಅದರಲ್ಲೂ ಸವರ್ಣೀಯ ಬಹುಸಂಖ್ಯಾತ ಹಿಂದೂ ಮತದಾರರನ್ನು ಪ್ರಜಾತಂತ್ರೀಕರಣಗೊಳಿಸುವ ನಿರಂತರ ಸಮರವನ್ನು ಪಕ್ಷಗಳು ನಡೆಸುವುದಿಲ್ಲವೋ ಅಲ್ಲಿಯವರೆಗೆ ಈ ಭಾರತೀಯ ಫ಼್ಯಾಸಿಸಂ ಒಂದು ಸುಸ್ಥಿರ ಫ಼್ಯಾಸಿಸಂ ಆಗಿಯೇ ಉಳಿದುಕೊಡಿರುತ್ತದೆ.

ಆದರೆ ಅಂಥಾ ಒಂದು ದೀರ್ಘ ಸಮರವನ್ನು ಹೂಡುವ ಇರಾದೆಯಾಗಲೀ, ಅಜೆಂಡಾ ಆಗಲೀ, ಸಂಘಟನಾ ಶಕ್ತಿಯಾಗಲೀ ಕಾಂಗ್ರೆಸ್ಸನ್ನೂ ಒಳಗೊಂಡಂತೆ ಯಾವ ಬಿಜೆಪಿ ವಿರೋಧಿ ಪಕ್ಷಗಳಿಗೂ ಇಲ್ಲ. ಆಗಾಗ ಅವರ ನಡುವೆ ಕಾಣಿಸಿಕೊಳ್ಳುವ ವೈರುಧ್ಯಗಳು ಬ್ರಾಹ್ಮಣವಾದಿ ಮತ್ತು ಬಂಡವಾಳವಾದಿ ಅಜೆಂಡಾಗಳ ಅನುಷ್ಠಾನದ ತೀವ್ರತೆಯಲ್ಲಿರುವ ಭಿನ್ನಾಭಿಪ್ರಾಯಗಳೇ ವಿನಾ ಅದರ ತಾತ್ವಿಕ ವಿರೋಧವಿಲ್ಲ.

ಜೋಡೋಗಳಲ್ಲಿ ಉತ್ತರವಿಲ್ಲ- ಸುದೀರ್ಘ ಜನಸಮರಕ್ಕೆ ಪರ್ಯಾಯವಿಲ್ಲ

ಸ್ವಾತಂತ್ರ್ಯೋತ್ತರ ನಾವು ಕಟ್ಟಿಕೊಂಡ ಪ್ರಜಾತಾಂತ್ರಿಕ ಸಾಧನಗಳು ಫ಼್ಯಾಸಿಸಂಅನ್ನು ಸೋಲಿಸುವಲ್ಲಿ ವಿಫಲವಾಗಿವೆ. ಬದಲಿಗೆ ಸಂವಿಧಾನದ ಸಂದಿಯಿಂದಲೇ ಈ ಫ಼್ಯಾಸಿಸ್ಟ್ ಸರ್ವಾಧಿಕಾರ ಹುಟ್ಟಿಕೊಂಡು ಸಾಂವಿಧಾನಿಕವಾಗಿಯೇ ಅಳ್ವಿಕೆ ಮಾಡುತ್ತಿದೆ. ಹೀಗಾಗಿ ಇಂದು ದೇಶ ಮತ್ತೆ ಸ್ವಾತಂತ್ರ್ಯಪೂರ್ವ ಸ್ಥಿತಿಗೆ ಮರಳಿದೆ.

ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯನ್ನು ಬುಡಮಟ್ಟ ನಿವಾರಿಸಿ ಸಮತೆ-ಮಮತೆಯನ್ನು ಅಧರಿಸಿದ ನವನಾಗರಿಕತೆಯನ್ನು ಕಟ್ಟುವ ಮೂಲಕ ಮಾತ್ರ ಇಂದು ಭಾರತಕ್ಕೆ ಎದುರಾಗಿರುವ ಫ಼್ಯಾಸಿಸಂ ಅನ್ನು ಸೋಲಿಸಲು ಸಾಧ್ಯ. ಅಂಥಾ ಸಮಾಜವಾದಿ ಪ್ರಬುದ್ಧ ಭಾರತಕ್ಕಾಗಿ ಒಂದು ಹೊಸ ಸ್ವಾತಂತ್ರ್ಯ ಹೋರಾಟವನ್ನೇ ಕಟ್ಟಬೇಕಿದೆ. ಅದರ ಭಾಗವಾಗಿ ಅಂಬೇಡ್ಕರ್ ಕನಸಿದ ನಿಜವಾದ ಸಂವಿಧಾನ, ಭಗತ್ ಸಿಂಗ ಆಶಯದ ಭಾರತ, ಸರ್ವರಿಗೂ ಸಮಪಾಲು ಸಮಬಾಳಿನ ಭಾರತವನ್ನು ಕಟ್ಟಬೇಕಿದೆ.

ಆದರೆ ಇವು ರಾತ್ರೋರಾತ್ರಿ ಸಂಭವಿಸುವ ಸಂಗತಿಯಲ್ಲ. ದ್ವೇಷ ಸಿದ್ಧಾಂತಕ್ಕೆ -ಬ್ರಾಹ್ಮಣವಾದ-ಬಂಡವಾಳದ ಕುತಂತ್ರಗಳಿಗೆ – ಬಲಿಯಾಗಿರುವ ನಮ್ಮದೇ ಜನರಲ್ಲಿ ಮತ್ತೆ ಸಮತಾವಾದಿ ಆಶಯಗಳನ್ನು ಬಿತ್ತುತ್ತಾ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಮೂಲಕ ಸಮಾಜದಲ್ಲಿ ಮತ್ತು ಅಧಿಕಾರದಲ್ಲಿ ಬೀರುಬಿಟ್ಟಿರುವ ಫ಼್ಯಾಸಿಸಂ ವಿರುದ್ಧ ನಡೆಸುವ ಸುದೀರ್ಘ ಜನಸಮರದ ಮೂಲಕ ಮಾತ್ರ ಸಾಧಿಸಬಹುದಾದ ವಿಜಯವಾಗಿದೆ.

ಇದು ಇಂದಿನ ಸಂದರ್ಭ.

ಇದು ನವಭಾರತದ ಕನಸಿಗರಲ್ಲಿ ಸದ್ಯಕ್ಕೆ ಫ಼್ಯಾಸಿಸಂ ಅನ್ನು ಸೋಲಿಸುವ ಪವಾಡ ಸದೃಶ ಮಂತ್ರದಂಡಗಳಿಲ್ಲ ಎಂಬ ವಾಸ್ತವದ ಅರಿವು ಮೂಡಿಸಬೇಕು. ಬೇರುಬಿಟ್ಟಿರುವ ಫ಼್ಯಾಸಿಸಂ ಅನ್ನು ಬುಡಸಮೇತ ಕಿತ್ತುಹಾಕುವ ಪ್ರಕ್ರಿಯೆಯು ರಕ್ತಸಿಕ್ತವೇ ಆಗಿರುತ್ತದೆ. ಏಕೆಂದರೆ ಸಮಾಜದ ಬಲಿಷ್ಟರು, ರಾಜ್ಯಬಲ ಫ಼್ಯಾಸಿಸ್ಟರ ಜೊತೆಗಿದೆ.

ಆದರೆ ಇತಿಹಾಸದಲ್ಲಿ ಜನತೆ ತಾಳ್ಮೆ, ಪರಿಶ್ರಮ, ತ್ಯಾಗ ಮತ್ತು ಬಲಿದಾನಗಳನ್ನು ಮಾಡುತ್ತಲೇ ಹಿಟ್ಲರುಗಳನ್ನು ಸೋಲಿಸಿದ್ದಾರೆ. ಭಾರತದಲ್ಲೂ ಇದು ಪ್ರಾಯಶಃ ದಶಕಗಳ ಕಾಲ ಒಂದೆರೆಡು ಪೀಳೆಗೆಗಳು ನಡೆಸಬೇಕಾದ ಜನಸಮರ. ಅದರ ಬದಲಿಗೆ ಹುಡುಕುವ ಅಡ್ಡಹಾದಿಗಳು ಮತ್ತು ಶಾರ್ಟ್ ಕಟ್ ಗಳು ಫ಼್ಯಾಸಿಸ್ಟರನ್ನು ನಮ್ಮ ಜನರ ನಡುವೆಯೇ ಇನ್ನಷ್ಟು ಬೇರು ಊರುವಂತೆ ಮಾಡಬಹುದು.

ಸಾರಾಂಶವಿಷ್ಟೆ:

ಭಾರತ್ ಜೋಡೋವನ್ನು ವಿರೋಧಿಸಬೇಕಿಲ್ಲ.
ಆದರೆ ಆ ನಡಿಗೆಯ ಕೆಲವು ಸಕಾರಾತ್ಮಕ ನಡೆಗಳು ಮತ್ತು ವ್ಯಕ್ತಿಗಳು, ಕಾಂಗ್ರೆಸ್ಸಿನ ವರ್ಗ ಹಿನ್ನೆಲೆ, ಫ಼್ಯಾಸಿಸ್ಟ್ ಶಕ್ತಿಗಳ ಜೊತೆಗೆ ಅದಕ್ಕಿರುವ ಸಾಂಸ್ಥಿಕ ಸಖ್ಯ ಹಾಗೂ ಅದರಿಂದಾಗಿ ಈ ನಡೆಗಳಿರುವ ಮಿತಿಯನ್ನು ಮರೆಸಬಾರದು. ಹಾಗೆಯೇ ಶರತ್ತು ಬದ್ಧ ಬೆಂಬಲಗಳಿಗೂ, ಬೇಶರತ್ ಬೆಂಬಲಗಳಿಗೂ ಯಾವುದೇ ಮೌಲಿಕ ವ್ಯತ್ಯಾಸವಿಲ್ಲ. ಅದೇರೀತಿ ಭಾರತ್ ಜೋಡೊ ಬಗ್ಗೆ ಬಾವಾವೇಶದ ತಿರಸ್ಕಾರವೂ ಅಗತ್ಯವಿಲ್ಲ.

ಆಗಬೇಕಿರುವುದು ಬ್ರಾಹ್ಮಣವಾದ-ಬಂಡವಾಳವಾದ ದ ವಿರುದ್ಧ ಸಮರಶೀಲ ಬೃಹತ್ ಜನಸಂಘಟನೆ. ಫ಼್ಯಾಸಿಸಂ ವಿರುದ್ಧ ಬೃಹತ್ ಮತ್ತು ಸುದೀರ್ಘ ಜನಸಮರ.

ಬ್ರಾಂತಿ ಛೋಡೋ- ಫ್ಯಾಸಿಸಂ ತೋಡೋ

ಬಂಡೆಗಲ್ಲುಗಳೂ ಕೊಚ್ಚಿಹೋಗುವಾಗ
ಅಂತಿಮ ಆಸರೆಯೆಂದು
’ಮರುಳು’ ಮನೆಯಲ್ಲಿ ಅವಿತುಕೊಂಡರೆ…
ಸುನಾಮಿಯಿಂದ ಬಚಾವಾಗಬಹುದೇ?…

ಸರ್ಜರಿಗೆ ಸಿದ್ದವಿಲ್ಲವೆಂದು
ಅನಸ್ತೇಶಿಯವನ್ನೇ ಆಶ್ರಯಿಸಿದರೆ
ನಿಶ್ಚಿತ ಸಾವು ನಿದಾನವಾಗಬಹುದೇ?

ಏಕೆಂದರೆ….

ಫ್ಯಾಸಿಸಂ ಎಂದರೆ…
ಉತ್ತರವಿಲ್ಲದ ಪ್ರಶ್ನೆಗಳು ಮಾತ್ರವಲ್ಲ…
ಉಸಿರುತೆಗೆದ ಉತ್ತರಗಳು…
ಉತ್ತರಕ್ಕೆ ತಕ್ಕಂತೆ ಮಾರ್ಪಡಾದ ಪ್ರಶ್ನೆಗಳು….

ಫ್ಯಾಸಿಸಂ ಎಂದರೆ

ಅಮಾಯಕರ ಹತ್ಯೆ ಮಾತ್ರವಲ್ಲ..
“ನಾಗರಿಕರ” ನಿಗೂಢ ಮೌನ

ಫ್ಯಾಸಿಸಂ ಎಂದರೆ
ಸನಾತನದ ಸವಾಲು…
ಜಾಗತಿಕ ದೈತ್ಯನ ಬಿಳಲು..

ಫ್ಯಾಸಿಸಂ ಎಂದರೆ
ತ್ರಾಣವಿಲ್ಲದ ಪ್ರಜಾತಂತ್ರ ಮಾತ್ರವಲ್ಲ,
ಸಂವಿಧಾನದ ಸಂದಿಯಿಂದಲೇ
ಹುಟ್ಟುವ ಸರ್ವಾಧಿಕಾರ…

ಫ್ಯಾಸಿಸಂ ಎಂದರೆ
ಓಟಿನಿಂದ ಸೋಲುವ ಪಕ್ಷವಲ್ಲ..
ಮೆರವಣಿಗೆಗೆ ಬಗ್ಗುವ ಸರ್ಕಾರವಲ್ಲ…
ಜೋಡಿಸುವಂತೆ ಒಡೆದ
ಬೊಂಬೆಯಲ್ಲ…

ತದ್ರೂಪಿಗಳು ಗೆಲ್ಲಬಲ್ಲ ಸಮರವಲ್ಲ…
ಫ್ಯಾಸಿಸಂ ಎಂದರೆ
ಮಹಾಮೈತ್ರಿ ಮಾಡಬೇಕಿರುವ ಮಹಾಸಮರ…
ನೊಂದವರ ಸೇನೆ ಮಾತ್ರ
ಗೆಲ್ಲಬಲ್ಲ
ಮಹಾಯುದ್ದ…

-ಶಿವಸುಂದರ್ (ಖ್ಯಾತ ಹಿರಿಯ ಪತ್ರಕರ್ತರು )


Spread the love