ಪಾಂಡವಪುರ : ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚು ಮಾಡಲು ಕೈಗೊಂಡಿರುವ ಕ್ರಮದಂತೆ 3ಎ ಅಡಿಯಲ್ಲಿ ಬರುವ ಒಕ್ಕಲಿಗ ಜನಾಂಗಕ್ಕೂ ಮೀಸಲಾತಿಯನ್ನು ಹೆಚ್ಚು ಮಾಡಬೇಕು ಎಂದು ಅಖಿಲ ಕರ್ನಾಟಕದ ಒಕ್ಕಲಿಗರ ಒಕ್ಕೂಟದ ಮುಖಂಡ ಚಿನಕುರಳಿ ಸಿ.ಆರ್.ರಮೇಶ್ ಒತ್ತಾಯಿಸಿದರು.
ಮಂಗಳವಾರ ತಮ್ಮ ತೋಟದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಸಮುದಾಯದ ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡುವುದಾದರೆ ಶೇ.16 ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮಯದಾಯಕ್ಕೆ ಸರ್ಕಾರ ಮೀಸಲಾತಿ ಹೆಚ್ಚು ಮಾಡಲಿ ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಮೀಸಲಾತಿ-3ಎ ಅಡಿಯಲ್ಲಿ ಒಕ್ಕಲಿಗ ಸಮುದಾಯ ಸೇರಿದೆ. 100ಕ್ಕೂ ಹೆಚ್ಚು ಒಕ್ಕಲಿಗ ಉಪ ಪಂಗಡಗಳು ಹಾಗೂ ಇತರ ಜಾತಿಗಳು ಸೇರಿವೆ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಮತ್ತು ಪಂಗಡದವರ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಅವರ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡಲು ಕೈಗೊಂಡಿರುವ ಕ್ರಮವನ್ನು ತಾವು ಸ್ವಾಗತಿಸುವುದಾಗಿ ಹೇಳಿದ ಅವರು, ಅದೇ ರೀತಿ 3ಎ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ ಶೇ.10ಕ್ಕೆ ಹೆಚ್ಚಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಒಕ್ಕಲಿಗ ಸಮುದಾಯ ಅನಾದಿಕಾಲದಿಂದಲೂ ಕೃಷಿಯನ್ನೇ ನಂಬಿ ಬದುಕಿದ್ದು, ಬೇಸಾಯ ವೆಚ್ಚ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಜತೆಗೆ ಅತಿವೃಷ್ಟಿ, ಪ್ರವಾಹ, ಬರಗಾಲ ಹಾಗೂ ಬೆಳೆ ರೋಗದಿಂದ ಒಕ್ಕಲಿಗ ಸಮುದಾಯ ನಾನಾ ಸಂಕಷ್ಟಗಳನ್ನು ಎದುರಿಸುತ್ತಿದೆ. ಅಲ್ಲದೇ ಸಮುದಾಯದ ಶೇ.70 ಮಂದಿ ಆರ್ಥಿಕವಾಗಿ ಹಿಂದುಳಿದಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ.10ಕ್ಕೆ ಏರಿಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಮುಖಂಡರಾದ ಕೋ.ಪು.ಗುಣಶೇಖರ್, ಹಾರೋಹಳ್ಳಿ ಧನ್ಯಕುಮಾರ್, ಎನ್.ಕೃಷ್ಣೇಗೌಡ, ಆರ್.ಚನ್ನಕೇಶವ ಇತರರಿದ್ದರು.
ವರದಿ : ಲೋಕರಕ್ಷಕ ಪಾಂಡುಪುರ