Spread the love

ಕೊಟ್ಟೂರು ;
ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ತಾಲೂಕ ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ಇಂದು ಪೂರ್ವಸಿದ್ದತಾ ಸಭೆಯನ್ನು ನಡೆಸಲಾಯಿತು.
ಮೊದಲಿಗೆ ವೀರಮಾತೆ ಕಿತ್ತೂರು ಚನ್ನಮ್ಮ ಜಯಂತಿಯನ್ನು ಕಛೇರಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಸಹಕಾರದೊಂದಿಗೆ 23.10.2022 ರಂದು ಬೆಳಿಗ್ಗೆ 10.00 ಗಂಟೆಗೆ ಆಚರಿಸಲು ತೀರ್ಮಾನಿಸಲಾಗಿದ್ದು, ಉಪನ್ಯಾಸದೊಂದಿಗೆ ಕಾರ್ಯಕ್ರಮವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಿತ್ತೂರು ರಾಣಿ ಚನ್ನಮ್ಮ ವೃತ್ತದೊಂದಿಗೆ ಮೂರ್ತಿಯನ್ನು ಪ್ರತಿಷ್ಠಾಪಿಸಲು ಹಾಗೂ ಪಂಚಮಸಾಲಿ ಸಮುದಾಯ ಭವನ ನಿರ್ಮಿಸಲು ಸ್ಥಳ ಒದಿಗಿಸಲು ಪಂಚಮಸಾಲಿ ಸಮಾಜದ ಮುಖಂಡರು ವಿನಂತಿಸಿದರು.
ನಂತರ ಹಲವಾರು ಪ್ರಾಂತ್ಯಗಳಾಗಿ ಹರಿದು ಹಂಚಿಹೋಗಿದ್ದ ಕನ್ನಡ ನಾಡು, ಕನ್ನಡ ಭಾಷಿಗರನ್ನು ಒಗ್ಗೂಡಿಸಲು ಸಾಕಷ್ಟು ಜನರು ಹೋರಾಡಿದ ಫಲವಾಗಿ ಏಕೀಕರಣಗೊಂಡು ಮೈಸೂರು ರಾಜ್ಯ ಉದಯವಾಗಿ ನಂತರ ಕರ್ನಾಟಕ ರಾಜ್ಯವಾಗಿ ನಾಮಕರಣಗೊಂಡಿದೆ. ಇಂತಹ ಕನ್ನಡ ನಾಡಿನ ಉದಯದ ಸಂತೋಷದ ದಿನವೇ ಕನ್ನಡ ರಾಜ್ಯೋತ್ಸವ. ಆದ್ದರಿಂದ ಕನ್ನಡಿಗರಾದ ನಾವೆಲ್ಲರೂ ರಾಜ್ಯೋತ್ಸವವನ್ನು ತುಂಬಾ ಉತ್ಸಾಹದಿಂದ, ಅರ್ಥಪೂರ್ಣವಾಗಿ ಆಚರಿಸಬೇಕಿದ್ದು ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಲು ತಹಶೀಲ್ದಾರ್ ಎಂ ಕುಮಾರಸ್ವಾಮಿ ವಿನಂತಿಸಿದರು.

ಮುಖಂಡರಾದ ಬದ್ದಿ ಮರಿಸ್ವಾಮಿ ಇವರು ಸಮಾಜದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಎಲ್ಲಾ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರು ಸೇರಿಕೊಂಡು ಮೆರವಣಿಗೆಯೊಂದಿಗೆ ಕಾರ್ಯಕ್ರಮವನ್ನು ತುಂಬಾ ಅದ್ದೂರಿಯಾಗಿ ಆಚರಿಸುವಂತೆ ಸಲಹೆ ನೀಡಿದರು.ಬೆಳಿಗ್ಗೆ ತಾಲೂಕಿನ ಎಲ್ಲಾ ಕಛೇರಿಗಳಲ್ಲಿ,ಶಾಲಾ-ಕಾಲೇಜುಗಳಲ್ಲಿ ಬೆಳಿಗ್ಗೆ 8.00 ಗಂಟೆಗೆ ಧ್ವಜಾರೋಹಣ ನೆರವೇರಿಸಿಕೊಂಡು ತಾಲೂಕ ಕಛೇರಿಯ ಆವರಣದಲ್ಲಿ ಬೆ.8.30 ಗಂಟೆಗೆ ನಡೆಯುವ ತಾಲೂಕು ಮಟ್ಟದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲರೂ ಹಾಜರಾಗುವಂತೆ ನಂತರ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದಿಂದ ವಿವಿಧ ವಾಧ್ಯತಂಡಗಳೊಂದಿಗೆ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆಯನ್ನು ಪಟ್ಟಣದ ಮುಖ್ಯ ರಸ್ತೆಯ ಮೂಲಕ ಸಾಗಿ ಎಪಿಎಂಸಿ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಕನ್ನಡ ನಾಡು ಕುರಿತ ಗೀತೆಗಳಿಗೆ ನೃತ್ಯ, ವಿಶೇಷ ಉಪನ್ಯಾಸ ನೆರವೇರಿಸಲಾಗುತ್ತಿದ್ದು, ತಾಲೂಕಿನ ನಾಗರೀಕರು ಈ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ತಹಶೀಲ್ದಾರರು ಕೋರಿದರು.ಸಭೆಯಲ್ಲಿ ಬೆಣ್ಣಿ ವಿಜಯಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ, ಶಿಕ್ಷಣ ಇಲಾಖೆಯ ಇಸಿಒ ಅಜ್ಜಪ್ಪ.ಸಿ, ಚಾಪಿ ಚಂದ್ರಪ್ಪ ಅಧ್ಯಕ್ಷರು, ಕೊಟ್ಟೂರು ತಾಲೂಕು ಪಂಚಮ ಸಾಲಿ ಸಮಾಜ ಹಾಗೂ ಮುಖಂಡರು,ವಿವಿಧ ಶಾಲಾ-ಕಾಲೇಜಿನ ಪ್ರಾಚಾರ್ಯರು, ಮುಖ್ಯಗುರುಗಳು,ತಾಲೂಕು ಮಟ್ಟದ ಅಧಿಕಾರಿಗಳು,ವಿವಿಧ ಸಮಾಜದ ಮುಖಂಡರು ಹಾಜರಿದ್ದರು. ಸಿ.ಮ.ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ವರದಿ : ವಿಷ್ಣು . ಎಲ್ .ಕೊಟ್ಟೂರು


Spread the love