Spread the love

ಅಂಬಾನಿ ಕುಟುಂಬದಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ. ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ನಿಶ್ಚಿತಾರ್ಥದ ಸಂಭ್ರಮದಲ್ಲಿ ಕುಟುಂಬವಿದ್ದು, ರಾಜಸ್ಥಾನದ ನಾಥ್‌ದ್ವಾರದಲ್ಲಿರುವ ಶ್ರೀನಾಥ್‌ಜೀ ದೇಗುಲದಲ್ಲಿ ಇವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಡೆದಿದೆ.

ಕೆಲ ದಿನಗಳ ಹಿಂದಷ್ಟೇ ಅಂಬಾನಿ ಪುತ್ರಿ ಇಶಾ ಅಂಬಾನಿ ಅವಳಿ ಮಕ್ಕಳೊಂದಿಗೆ ಮನೆಗೆ ಆಗಮಿಸಿದಾಗ ಅವರನ್ನು ಮುಕೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಬಹಳ ಅದ್ಧೂರಿಯಾಗಿ ಮನೆಗೆ ಬರ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಇನ್ನು ಚರ್ಚೆಯಲ್ಲಿದೆ. ಹೀಗಿರುವಾಗ ಅಂಬಾನಿ ಕುಟುಂಬ ಇನ್ನೊಂದು ಶುಭ ಸಮಾರಂಭಕ್ಕೆ ಸಜ್ಜಾಗಿದೆ.

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ನಿಶ್ಚಿತಾರ್ಥವೂ ವಿರೇನ್ ಮರ್ಚೆಂಟ್ ಹಾಗೂ ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಇಂದು ನಡೆದಿದೆ. ಈ ಹಿನ್ನೆಲೆಯಲ್ಲಿ ಇಂದು ಜೋಡಿ ಕುಟುಂಬ ಸಮೇತ ರಾಜಸ್ಥಾನದ ನಾಥ್‌ದ್ವಾರದಲ್ಲಿರುವ ಶ್ರೀನಾಥ್ ಜೀ ದೇಗುಲಕ್ಕೆ ಭೇಟಿ ನೀಡಿದ್ದಾರೆ. ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಕಾರ್ಪೋರೇಟ್ ವ್ಯವಹಾರಗಳ ನಿರ್ದೇಶಕ ಪರಿಮಲ್ ನಥ್ವಾನಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಅನಂತ್ ಹಾಗೂ ರಾಧಿಕಾ ಅವರ ರೊಕಾ ಕಾರ್ಯಕ್ರಮ ಅಥವಾ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ದೇಗುಲದಲ್ಲಿ ನಡೆದಿದೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಪರಿಮಲ್ ನಥ್ವಾನಿ, ‘ನಾಥ್‌ದ್ವಾರದ ಶ್ರೀನಾಥ್‌ಜೀ ದೇಗುಲದಲ್ಲಿ ನಡೆದ ರೋಕಾ ಸೆರೆಮನಿಯಲ್ಲಿ (ನಿಶ್ಚಿತಾರ್ಥ ಕಾರ್ಯಕ್ರಮದ) ಎಂಗೇಜ್ ಆದ ಅನಂತ್ ಹಾಗೂ ರಾಧಿಕಾಗೆ ಅಭಿನಂದನೆಗಳು, ಶ್ರೀನಾಥ್‌ಜೀ ನಿಮ್ಮನ್ನು ಸದಾ ಆಶೀರ್ವಾದಿಸಲಿ ಎಂದು ಟ್ವಿಟ್ ಮಾಡಿದ್ದಾರೆ. ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಅನಂತ ಅವರು ನೀಲಿ ಬಣ್ಣದ ಸಂಪ್ರದಾಯಿಕ ಕುರ್ತಾ ಧರಿಸಿ ಮಿಂಚಿದರೆ ಇತ್ತ ರಾಧಿಕಾ ಮರ್ಚೆಂಟ್ ಅವರು ಪೀಚ್ ಬಣ್ಣದ ಲೆಹೆಂಗಾ ಧರಿಸಿದ್ದರು.


Spread the love

By admin