Spread the love

ಮೆಕ್ಸಿಕೊ: ಮೆಕ್ಸಿಕೋದ ಸಿಯುಡಾಡ್ ಜುವಾರೆಜ್‌ನಲ್ಲಿ ಬಂದೂಕುಧಾರಿಗಳು ಜೈಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ 10 ಮಂದಿ ಭದ್ರತಾ ಸಿಬ್ಬಂದಿ ಮತ್ತು 4 ಕೈದಿಗಳು ಸೇರಿದಂತೆ ಒಟ್ಟು 14ಮಂದಿ ಮೃತಪಟ್ಟಿದ್ದಾರೆ.

ಕೈದಿಗಳ ಕುಟುಂಬದವರು ತಮ್ಮ ಸದಸ್ಯರನ್ನು ಭೇಟಿ ಮಾಡಲು ಜೈಲಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಂದೂಕುಧಾರಿಗಳು ಪೆನಿಟೆನ್ಷಿಯರಿ ಸೆಂಟರ್‌ಗೆ ವಾಹನಗಳಲ್ಲಿ ಬಂದಿದ್ದಾರೆ. ನಂತರ ಭದ್ರತಾ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ವೇಳೆ 24 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.

ಮೆಕ್ಸಿಕನ್ ಸೈನಿಕರು ಮತ್ತು ರಾಜ್ಯ ಪೊಲೀಸರು ತಕ್ಷಣ ಜೈಲಿನ ನಿಯಂತ್ರಣ ಪಡೆದಿದ್ದಾರೆ. ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೆಕ್ಸಿಕನ್ ಜೈಲುಗಳಲ್ಲಿ ಈ ಹಿಂದೆಯೂ ಹಲವಾರು ಹಿಂಸಾಚಾರದ ದಾಳಿಗಳು ನಡೆದಿದೆ.

ಜೈಲಿನ ಮೇಲೆ ದಾಳಿ ಮಾಡುವುದಕ್ಕೂ ಮೊದಲು, ಮುನ್ಸಿಪಲ್ ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆದಿತ್ತು. ದಾಳಿಕೋರರನ್ನು ಹಿಂಬಾಲಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಂದೂಕುಧಾರಿಗಳನ್ನು ಹತ್ಯೆಗೈದಿದ್ದರು.


Spread the love

By admin