Spread the love

ಬೆಂಗಳೂರು: ಮುಂದಿನ ದಿನಗಳಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದ 25 ತಾಲೂಕುಗಳಲ್ಲಿ ಮಿನಿ ಟೆಕ್ಸ್​ಟೈಲ್ ಪಾರ್ಕ್ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ನೇಕಾರರ ಉತ್ಪನ್ನಗಳ ಮಾರುಕಟ್ಟೆಯನ್ನು ಡಿಜಿಟಲ್ ವೇದಿಕೆಗೂ ವಿಸ್ತರಿಸಿ ಪ್ರಮುಖ ಆನ್​ಲೈನ್ ವ್ಯಾಪಾರಿ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

 

ಗೃಹ ಕಚೇರಿ ಕೃಷ್ಣಾದಲ್ಲಿ ವಿದ್ಯುತ್ ಮಗ್ಗ ನೇಕಾರರು ಮತ್ತು ಕಾರ್ಮಿಕರಿಗೆ ಡಿಬಿಟಿ ಮೂಲಕ ನೇಕಾರ್ ಸಮ್ಮಾನ್ ಯೋಜನೆಯ ಸಹಾಯಧನ ವರ್ಗಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹತ್ತಿಯ ಸಂಸ್ಕರಣೆಯಿಂದ, ವಸ್ತ್ರ ತಯಾರಿಕೆ, ಸಿದ್ಧ ಉಡುಪು ತಯಾರಿಕೆವರೆಗಿನ ಎಲ್ಲ ಹಂತಗಳ ಸೌಲಭ್ಯಗಳನ್ನು ಒಳಗೊಂಡ ಮಿನಿ ಟೆಕ್ಸ್​ಟೈಲ್ಸ್​ ಪಾರ್ಕ್ ಸ್ಥಾಪಿಸುವ ಮೂಲಕ ನೇಕಾರರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನೇಕಾರರೊಂದಿಗೆ ವೈಯಕ್ತಿಕವಾಗಿ ಹೆಚ್ಚಿನ ಒಡನಾಟವನ್ನು ತಾವು ಹೊಂದಿದ್ದು, ಅವರ ಸಂಕಷ್ಟಗಳನ್ನು ಸಹ ಹತ್ತಿರದಿಂದ ಕಂಡಿದ್ದೇನೆ. ನೇಕಾರರು ತಮ್ಮ ಉತ್ಪನ್ನಗಳ ಗುಣಮಟ್ಟ ವೃದ್ಧಿಸುವ ಮೂಲಕ ರಫ್ತು ಮಾಡಲು ಸಹ ಮುಂದಾಗಬೇಕು. ಡಿಜಿಟಲ್ ವೇದಿಕೆಯ ಮೂಲಕ ಮಾರುಕಟ್ಟೆ ವಿಸ್ತರಿಸಬೇಕು. ಇದಕ್ಕೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಕಾರ ನೀಡಲಿದ್ದು, ಅಮೇಜಾನ್, ಫ್ಲಿಪ್​​​​ಕಾರ್ಟ್ ಮತ್ತಿತರ ಆನ್ಲೈನ್ ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ವಿದ್ಯುತ್ ಮಗ್ಗ ನೇಕಾರರಿಗೆ ಸಂಕ್ರಾಂತಿ ಕೊಡುಗೆ: ಈವರೆಗೆ ಕೈಮಗ್ಗ ನೇಕಾರರಿಗೆ ಮಾತ್ರ ನೆರವು ನೀಡುವ ಯೋಜನೆ ಜಾರಿಯಲ್ಲಿತ್ತು. ಆದರೆ, ವಿದ್ಯುತ್ ಮಗ್ಗದ ನೇಕಾರರು ಹಾಗೂ ಕಾರ್ಮಿಕರು ಸಹ ಸಂಕಷ್ಟದಲ್ಲಿರುವುದನ್ನು ಅರಿತು ಸರ್ಕಾರವು ಸಂಕ್ರಾಂತಿಯ ಕೊಡುಗೆಯಾಗಿ ಮಗ್ಗಪೂರ್ವ ಚಟುವಟಿಕೆಗಳಲ್ಲಿ ತೊಡಗುವ ಕಾರ್ಮಿಕರು ಹಾಗೂ ವಿದ್ಯುತ್ ಮಗ್ಗ ನೇಕಾರರಿಗೂ ಈ ಸೌಲಭ್ಯ ವಿಸ್ತರಿಸಿದೆ ಎಂದರು.


Spread the love

By admin