ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ 10 ಯಾತ್ರಿಕರು ಸಾವನ್ನಪ್ಪಿದ್ದಾರೆ. ವಾವಿ ಪೊಲೀಸ್ ಠಾಣೆ ವ್ಯಾಪ್ತಿಯ ಪಥರೆ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ 7 ಮಹಿಳೆಯರು ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.
ಮೃತರು ಐಷಾರಾಮಿ ಬಸ್ ನಲ್ಲಿ ಶಿರಡಿಗೆ ತೆರಳುತ್ತಿದ್ದರು. ಇನ್ನು 17 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಿನ್ನಾರ್ ಗ್ರಾಮೀಣ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವಾವಿ ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ವಾವಿ ಪೊಲೀಸರು ದೌಡಾಯಿಸಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಥಾಣೆ ಜಿಲ್ಲೆಯ ಅಂಬರನಾಥ್ ನಿಂದ ಐಷಾರಾಮಿ ಬಸ್ ಸುಮಾರು 45 ಜನರನ್ನು ಹೊತ್ತು ಶಿರಡಿಗೆ ತೆರಳುತ್ತಿತ್ತು.
ಸಿನ್ನಾರ ಶಿರಡಿ ಹೆದ್ದಾರಿಯಲ್ಲಿ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿಯ ರಸ್ತೆ ವಿಸ್ತರಣೆ ಬಹುತೇಕ ಪೂರ್ಣಗೊಂಡಿದ್ದರೂ ರಸ್ತೆ ಅಪಘಾತಗಳು ಕಡಿಮೆಯಾಗಿಲ್ಲ.