ಪಕ್ಷದ ವರ್ಚಸ್ಸಿಗೆ ಧಕ್ಕೆ ತರದಂತೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ಸೂಚನೆ ನೀಡಲಾಗಿದೆ.
ಇತ್ತೀಚೆಗೆ ಯತ್ನಾಳ್ ಅವರು ನೀಡಿದ್ದ ಹೇಳಿಕೆಯ ಬಗ್ಗೆ ರಾಜ್ಯ ಬಿಜೆಪಿಯಿಂದ ಕೇಂದ್ರೀಯ ಶಿಸ್ತು ಸಮಿತಿ ಗಮನಕ್ಕೆ ತರಲಾಗಿತ್ತು.
ಹೀಗಾಗಿ ದೂರವಾಣಿಯ ಮೂಲಕ ಯತ್ನಾಳ್ ಅವರೊಂದಿಗೆ ಶಿಸ್ತು ಸಮಿತಿ ಮಾತುಕತೆ ನಡೆಸಿದೆ.
ರಾಜ್ಯ ಸಮಿತಿಯಿಂದ ಯತ್ನಾಳ್ ವಿರುದ್ಧ ದೂರು ನೀಡಲಾಗಿದ್ದು, ಹೈಕಮಾಂಡ್ ಅಲರ್ಟ್ ಆಗಿದೆ. ಬಿಜೆಪಿ ವರಿಷ್ಠರು ಯತ್ನಾಳ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ದೂರವಾಣಿ ಮೂಲಕ ಯತ್ನಾಳ್ ಜೊತೆ ಮಾತನಾಡಿದ್ದು, ಪಕ್ಷದ ಶಿಸ್ತು ಉಲ್ಲಂಘಿಸದಂತೆ ಸೂಚನೆ ನೀಡಿದ್ದಾರೆ.
ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದಲೂ ದೂರವಾಣಿ ಮೂಲಕ ಯತ್ನಾಳ್ ಅವರಿಗೆ ಸೂಚನೆ ನೀಡಲಾಗಿದ್ದು, ಪಕ್ಷದ ಶಿಸ್ತು ಉಲ್ಲಂಘಿಸಿದಂತೆ ತಿಳಿಸಿದ್ದಾರೆ. ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇಂದ್ರಕ್ಕೆ ರಾಜ್ಯ ಬಿಜೆಪಿ ಘಟಕದಿಂದ ಶಿಫಾರಸು ಮಾಡಲಾಗಿತ್ತು. ಯತ್ನಾಳ್ ವಿರುದ್ಧ ಶಿಸ್ತು ಉಲ್ಲಂಘನೆಯ ಆರೋಪ ಮಾಡಲಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಸೂಚನೆ ನೀಡಿದೆ ಎನ್ನಲಾಗಿದೆ.