Spread the love

ಕೋಲಾರ: ರಾಜ್ಯ ರಾಜಕೀಯದಲ್ಲಿ ಭ್ರಷ್ಟಾಚಾರ ಆರೋಪಗಳು ತಾರಕಕ್ಕೇರಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳ ಮೂಲಕ ಬಡಿದಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿತ್ತು ಎಂಬ ಬಿಜೆಪಿ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ದಾರೆ.

ಕೋಲಾರದ ಟಮಕ ಬಳಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನ್ನ ಅವಧಿಯಲ್ಲಿ ಒಂದು ಪೈಸೆ ಲಂಚ ತೆಗೆದುಕೊಂಡಿದ್ದರೆ ತೋರಿಸಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ಲಂಚ ಸ್ವೀಕರಿಸಿದ್ದನ್ನು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಂಡು ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮತ್ತೆ ನಿವೃತ್ತಿಯ ಮಾತುಗಳನ್ನಾಡಿದ್ದಾರೆ.

ಇದೇ ವೇಳೆ ಮುಂಬರುವ ಚುನಾವಣೆಯಲ್ಲಿ ನಾನು ಕೋಲಾರದಿಂದಲೇ ಸ್ಪರ್ಧಿಸುತ್ತೇನೆ. ಹೈಕಮಾಂಡ್ ಸೂಚಿಸಿದರೆ ಕೋಲಾರದಿಂದಲೇ ಸ್ಪರ್ಧಿಸುವುದು ಖಚಿತ ಇದರಲ್ಲಿ ಗೊಂದಲವಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೂ ಟಾಂಗ್ ನೀಡಿದ್ದಾರೆ.


Spread the love

By admin