ಮಾವನೊಬ್ಬ ತನ್ನ ಅಳಿಯನಿಗೆ ಕುಡಿಯುವುದನ್ನು ಬಿಟ್ಟು ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದ್ದಕ್ಕೆ ಘೋರ ಕೃತ್ಯ ನಡೆದು ಹೋಗಿದೆ. ಕೋಪಗೊಂಡ ಅಳಿಯ ಕೊಡಲಿಯಿಂದ ಕೊಚ್ಚಿ ಮಾವನನ್ನು ಕೊಲೆ ಮಾಡಿದ್ದಾನೆ.
ಇಂತಹದೊಂದು ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ಗುರುವಾರದಂದು ನಡೆದಿದೆ.
62 ವರ್ಷದ ಮಲ್ಲಪ್ಪ ಗಂಗಪ್ಪ ನಂದನ್ನೆವರ ಕೊಲೆಯಾಗಿದ್ದು, ಈತನನ್ನು ಅಳಿಯ 30 ವರ್ಷದ ಉಮೇಶ ಫಕೀರಪ್ಪ ಹಾವುಕಡದವರ ಕೊಲೆ ಮಾಡಿದ್ದಾನೆ.
ಮಲ್ಲಪ್ಪ ಹೂಲಿ ಗ್ರಾಮದ ನಿವಾಸಿಯಾಗಿದ್ದು, ಬೆಟಸೂರು ಗ್ರಾಮದ ಉಮೇಶ್ ಕೂಡಾ ಸದ್ಯ ಅಲ್ಲಿಯೇ ವಾಸಿಸುತ್ತಿದ್ದ. ಗುರುವಾರ ಮಲ್ಲಪ್ಪ ಅಳಿಯನಿಗೆ ಬುದ್ಧಿವಾದ ಹೇಳಿದ್ದು, ಇದರಿಂದ ಸಿಟ್ಟಿಗೆದ್ದ ಆತ ಮನೆಯಲ್ಲಿದ್ದ ಕೊಡಲಿಯಿಂದ ಮಾವನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಸವದತ್ತಿ ಠಾಣೆ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.